ನವದೆಹಲಿ: ಲೋಕಸಭೆ ಚುನಾವಣೆ ನೆಪದಲ್ಲಿ ಬಿಡುಗಡೆ ಭರವಸೆಯಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಈಗ ಎನ್ಐಎ ಸಂಕಷ್ಟ ಎದುರಾಗಿದೆ. ಹೀಗಾಗಿ ಅವರ ಬಿಡುಗಡೆ ಮತ್ತಷ್ಟು ಮುಂದೂಡಿಕೆಯಾಗುವ ನಿರೀಕ್ಷೆಯಿದೆ.
ಅಬಕಾರಿ ಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಸಿಎಂ ಕೇಜ್ರಿವಾಲ್ ರನ್ನು ಬಂಧಿಸಿತ್ತು. ಇಂದು ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದೆ. ಚುನಾವಣೆ ಗಮನದಲ್ಲಿಟ್ಟುಕೊಂಡು ಅವರಿಗೆ ಮಧ್ಯಂತಹ ಜಾಮೀನು ನೀಡುವ ಬಗ್ಗೆ ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಆದರೆ ಈಗ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ನಿಂದ ಆಮ್ ಆದ್ಮಿ ಪಕ್ಷಕ್ಕೆ ರಾಜಕೀಯ ಫಂಡ್ ಪಡೆಯಲಾಗಿದೆ ಎಂದು ಆರೋಪಿಸಿ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಎನ್ಐಎ ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ.
ದೇವೇಂದ್ರ ಪಾಲ್ ಭುಲ್ಲರ್ ಬಿಡುಗಡೆಗೆ ಅನುವಾಗುವಂತೆ ಮತ್ತು ಖಲಿಸ್ತಾನಿ ಪರ ಭಾವನೆಗಳನ್ನು ಪ್ರಚೋದಿಸಲು ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಕೇಜ್ರಿವಾಲ್ ಗೆ ಉರುಳಾಗಿದೆ. ಈ ಪ್ರಕರಣವನ್ನು ಎನ್ಐಎ ತನಿಖೆ ನಡೆಸಲಿದ್ದು ಕೇಜ್ರಿವಾಲ್ ಬಿಡುಗಡೆಗೆ ಸಂಕಷ್ಟ ಎದುರಾಗಿದೆ.