Publish Date: Tue, 18 Sep 2018 (17:02 IST)
Updated Date: Tue, 18 Sep 2018 (17:04 IST)
ಯುವಕ ಯುವತಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮಧ್ಯ ಘರ್ಷಣೆ ನಡೆದಿದೆ.
ದೂರು ನೀಡಲು ಬಂದ ಯುವಕನ ಮೇಲೆ ಪಿ.ಎಸ್.ಐ ಸೇರಿದಂತೆ ಹಾಗೂ ಇಬ್ಬರು ಪೊಲೀಸ್ ಪೇದೆಗಳಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ.
ಯುವಕನನ್ನ ಹಿಗ್ಗಾ ಮುಗ್ಗಾ ಪಿ.ಎಸ್.ಐ ಚಂದ್ರು ಹೆರಕಲ್ ಮತ್ತು ಪೇದೆಗಳು ಥಳಿಸಿದ್ದಾರೆ. ಘಟನೆಯಲ್ಲಿ ಪಾಂಡು ಮೈಲಾರ ಎಂಬ ಯುವಕನ ಕಾಲು, ತಲೆ, ಕೈಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಯುವಕನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೇ ಯುವಕನ ಸಂಬಂಧಿಕರ ಮೇಲೂ ಪೊಲೀಸರಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ. ಹನುಮಪ್ಪ ದನಾಕಾಯೋರ, ಬಸಪ್ಪ ಹನುಮಪ್ಪ ಮೈಲಾರ, ಸುರೇಶ್ ಮೈಲಾರ, ದೇವರಾಜ ಮೈಲಾರ, ಭೀಮಪ್ಪ ದನಾಕಾಯೋರ ಎಂಬುವರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದವರು ಬಾದಾಮಿ ತಾಲೂಕಿನ ಚಿಂಚಲಕಟ್ಟಿ ಗ್ರಾಮದವರಾಗಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಆಗ ಪ್ರಕರಣ ಕೆರೂರು ಪೊಲೀಸ್ ಠಾಣೆ ಮಟ್ಟಿಲೇರಿತ್ತು. ಒಂದು ಗುಂಪಿನ ಪರವಾಗಿ ನಿಂತು ಪಿ.ಎಸ್.ಐ ಹೆರಕಲ್ ಯುವಕ ಹಾಗೂ ಆತನ ಕಡೆಯವರಿಗೆ ಥಳಿಸಿರುವುದಾಗಿ ಆರೋಪಿಸಲಾಗುತ್ತಿದೆ.