ಬೆಂಗಳೂರು: ಮುಸ್ಲಿಮರಿಗೆ ಮತದಾನ ಹಕ್ಕು ನೀಡಬಾರದು ಎಂದಿದ್ದ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು ಸ್ವಾಮೀಜಿಗಳು ತಮ್ಮ ಚೌಕಟ್ಟಿನಲ್ಲಿರಬೇಕು ಎಂದಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ನಿನ್ನೆ ವಕ್ಫ್ ಆಸ್ತಿ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿ ಮುಸ್ಲಿಮರಿಗೆ ಮತದಾನದ ಹಕ್ಕನ್ನೇ ನೀಡಬಾರದು. ಆಗ ದೇಶ ನೆಮ್ಮದಿಯಾಗಿ ಇರಲು ಸಾಧ್ಯ ಎಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈಗಾಗಲೇ ಗೃಹಸಚಿವ ಪರಮೇಶ್ವರ್, ಮಹದೇವಪ್ಪ ಕಿಡಿ ಕಾರಿದ್ದಾರೆ.
ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ ಮತ್ತು ಅದು ನಮ್ಮ ಸಂಸ್ಕೃತಿಯೂ ಅಲ್ಲ. ಆದರೆ ಸ್ವಾಮೀಜಿಗಳ ಸಂಸ್ಕೃತಿ ಕೂಡಾ ಅದಲ್ಲ. ನಾವು ನಮ್ಮ ಚೌಕಟ್ಟಿನಲ್ಲಿರಬೇಕು. ನಿನ್ನೆ ತಾನೇ ನಾವು ಸಂವಿಧಾನ ದಿನಾಚರಣೆ ಮಾಡಿದ್ದೇವೆ. ನಮ್ಮ ಸಂವಿಧಾನ ಎಲ್ಲಾ ಮತ, ಜಾತಿ, ವರ್ಗದವರಿಗೆ ಒಂದೇ ಹಕ್ಕನ್ನು ಕೊಟ್ಟಿದೆ. ರಾಷ್ಟ್ರಪತಿಗಳಿಗೂ ಒಂದೇ ಮತದಾನ, ಸಾಮಾನ್ಯ ಪ್ರಜೆಗಳಿಗೂ ಒಂದೇ ಮತದಾನ. ಅಂತಹದ್ದರಲ್ಲಿ ಸ್ವಾಮೀಜಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಹೊರತು ಇಂತಹ ಮಾತುಗಳನ್ನು ಆಡಿ ಚಪ್ಪಾಳೆ ತಟ್ಟಬಾರದು ಎಂದು ಲಕ್ಷ್ಮೀ ಹೆಬ್ಬಾಳ್ಕ ರ್ ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ ನಾನು ಹೈಕಮಾಂಡ್ ಅಲ್ಲ, ಪಕ್ಷದ ಅಧ್ಯಕ್ಷೆಯೂ ಅಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ.