ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಶಾಲಾ ಮಕ್ಕಳ ಸಮವಸ್ತ್ರಕ್ಕೂ ಕತ್ತರಿ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಟೀಕಾ ಪ್ರಹಾರ ನಡೆಸಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಸಮವಸ್ತ್ರ ವಿತರಿಸುತ್ತದೆ. ಆದರೆ ಈ ವರ್ಷ ಶಾಲಾರಂಭದಲ್ಲಿ ಒಂದು ಜೊತೆ ಬಟ್ಟೆ ನೀಡಲಾಗಿತ್ತು. ಎರಡನೇ ಜೊತೆ ಅಕ್ಟೋಬರ್ ನಲ್ಲಿ ನೀಡಬೇಕಿತ್ತು. ಆದರೆ ಈಗ ವರ್ಷಾಂತ್ಯವಾಗುತ್ತಿದ್ದು, ಇನ್ನೂ ಮಕ್ಕಳಿಗೆ ಇನ್ನೊಂದು ಜೊತೆ ಸಮವಸ್ತ್ರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಲವು ಯೋಜನೆಗಳಿಗೆ ಕತ್ತರಿ ಹಾಕಿದೆ ಎಂಬ ಆರೋಪವಿದೆ. ಆ ಪೈಕಿ ಈಗ ಮಕ್ಕಳ ಸಮವಸ್ತ್ರವೂ ಸೇರಿಕೊಂಡಿತಾ ಎಂಬ ಅನುಮಾನ ಮೂಡಿದೆ. ಇದುವರೆಗೆ ಮಕ್ಕಳಿಗೆ ಒಂದು ಜೊತೆ ಯೂನಿಫಾರಂ, ಒಂದು ಜೊತೆ ಸಾಕ್ಸ್ ಮಾತ್ರ ನೀಡಲಾಗಿದೆ.
ಈ ಬಗ್ಗೆ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ, ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಹಳ್ಳ ಹಿಡಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಕ್ಕಳಿಗೆ ಸಮವಸ್ತ್ರ ವಿತರಿಸುವುದಕ್ಕೂ ದುಡ್ಡಿಲ್ಲ. ಸ್ವಯಂ ಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯನವರೇ, ವಿವೇಚನೆಯಿಲ್ಲದ ನೀತಿಗಳಿಂದ ರಾಜ್ಯದ ಆರ್ಥಿಕತೆಯ ತೇರು ನಿಂತು ಹೋಗಿದೆ. ದಿವಾಳಿ ಘೋಷಣೆಯಷ್ಟೇ ಬಾಕಿ ಉಳಿದಿರುವುದು. ತಾವು ಕುರ್ಚಿಯಿಂದ ತೊಲಗದ ಹೊರತು ರಾಜ್ಯದ ಜನರಿಗೆ ನೆಮ್ಮದಿಯಿಲ್ಲ ಎಂದು ಟೀಕಿಸಿದೆ.