ಬೆಂಗಳೂರು: ಅಪಘಾತದಲ್ಲಿ ಪೆಟ್ಟು ಮಾಡಿಕೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚೇತರಿಸಿಕೊಂಡು ಮತ್ತೆ ತಮ್ಮ ದೈನಂದಿನ ಕೆಲಸ ಕಾರ್ಯಕ್ಕೆ ಮರಳಿದ್ದಾರೆ. ಇದರ ನಡುವೆಯೇ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸಂಕ್ರಾಂತಿ ದಿನ ಬೆಳಗಾವಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕೆಲವು ದಿನ ಆಸ್ಪತ್ರೆಯಲ್ಲಿದ್ದರು. ಅದಾದ ಬಳಿಕ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಫೀಲ್ಡಿಗಿಳಿದಿದ್ದಾರೆ.
ಇನ್ನೀಗ ಜನರನ್ನು ಭೇಟಿ ಮಾಡುವ ಕಾರ್ಯಕ್ರಮ ಶುರು ಮಾಡುವುದಾಗಿ ಹೇಳಿರುವ ಅವರು ತಮ್ಮ ಇಲಾಖೆಯ ನೆನೆಗುದಿಗೆ ಬಿದ್ದಿರುವ ಕಾರ್ಯಕ್ರಮಗಳಿಗೆ ಮರು ಚಾಲನೆ ನೀಡಲು ಮುಂದಾಗಿದ್ದಾರೆ. ವಿಶೇಷವಾಗಿ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ ಎಂದು ಮಹಿಳೆಯರು ಆಕ್ರೋಶಗೊಂಡಿದ್ದಾರೆ.
ಇದೀಗ ಸಚಿವರು ಗೃಹಲಕ್ಷ್ಮಿ ಹಣ ಜಮೆ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾಲೂಕು ಪಂಚಾಯತಿ ಮುಖಾಂತರ ಹೊಸ ವಿಧಾನದಲ್ಲಿ ಗೃಹಲಕ್ಷ್ಮಿ ಹಣ ಹಾಕಲು ಶುರು ಮಾಡಿದ್ದರಿಂದ ಕೊಂಚ ನಿಧಾನವಾಗಿದೆ. ಇನ್ನೀಗ ಹಳೆಯ ವಿಧಾನದಲ್ಲೇ ಪಾವತಿ ಮಾಡುತ್ತೇವೆ. ಈಗಾಗಲೇ ಕೆಲವು ಕಡೆ ಹಾಕಿದ್ದೇವೆ. ಸದ್ಯದಲ್ಲೇ ಎಲ್ಲಾ ಕಡೆ ಆಗುತ್ತದೆ. ಮುಂದಿನ ತಿಂಗಳಿನಿಂದ ಎಂದಿನಂತೆ ಹಣ ಜಮೆ ಆಗಲಿದೆ ಎಂದು ಭರವಸೆ ನೀಡಿದ್ದಾರೆ.