ಬೆಳಗಾವಿ: ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಭೇಟಿ ಮಾಡಲು ಮುಂದಿನ 48 ಗಂಟೆ ಯಾರೂ ಬರಬೇಡ್ರೀ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಮನವಿ ಮಾಡಿದ್ದಾರೆ.
ಸಂಕ್ರಾಂತಿ ದಿನ ತಮ್ಮ ಬೆಳಗಾವಿ ನಿವಾಸಕ್ಕೆ ತೆರಳುತ್ತಿದ್ದಾಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮರಕ್ಕೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಟ್ಯಾಂಕರ್ ನಿಂದ ತಪ್ಪಿಸಲು ಹೋಗಿ ದುರ್ಘಟನೆಯಾಗಿತ್ತು ಎಂದು ಬಳಿಕ ತನಿಖೆಯಿಂದ ತಿಳಿದುಬಂದಿತ್ತು.
ಘಟನೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು, ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಅವರಿಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಲೂ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ.
ಅವರ ಆರೋಗ್ಯದ ಬಗ್ಗೆ ಇಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮೇಡಂರವರು ತುಂಬಾ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ತಲೆ ಗಾಯ ವಾಸಿಯಾಗಿದೆ. ಆದರೆ ತಲೆಗೆ ಪೆಟ್ಟಾಗಿದ್ದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆಗಾಗ ಅವರನ್ನು ನೋಡಲು ಅನೇಕರು ಬರುತ್ತಲೇ ಇರುತ್ತಾರೆ. ಹೀಗಾಗಿ ಅವರಿಗೆ ಸೂಕ್ತ ವಿಶ್ರಾಂತಿ ಸಿಗುತ್ತಿಲ್ಲ. ಇದರಿಂದ ಸ್ವಲ್ಪ ತಲೆ ಚಕ್ಕರ್ ಬಂದಂತೆ ಅನಿಸುತ್ತಿದೆ ಎಂದಿದ್ದಾರೆ.
ಹೀಗಾಗಿ ನಾವು ಮಾಧ್ಯಮಗಳ ಮೂಲಕ ಎಲ್ಲರಿಗೂ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ಯಾರೂ ಅವರನ್ನು ಮುಂದಿನ 48 ಗಂಟೆ ಕಾಲ ಯಾರೂ ನೋಡಲು ಬರಬೇಡಿ. ಅವರು ಈ ಸಂದರ್ಭದಲ್ಲಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡು ಸುಧಾರಿಸಿದರೆ ಇನ್ನು ಎರಡು ದಿನದಲ್ಲಿ ಡಿಸ್ಚಾರ್ಜ್ ಆಗಿ ಹೋಗಬಹುದು. ಸದ್ಯಕ್ಕೆ ಅವರು ಆರಾಮವಾಗಿದ್ದಾರೆ ಎಂದಿದ್ದಾರೆ.