ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಹಣಕ್ಕೂ ಕುತ್ತು ಬರುತ್ತದಾ ಎಂಬ ಅನುಮಾನಗಳಿಗೆ ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಈಗ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಕೆಲವರಿಗೆ ಅರ್ಹತೆಯಿದ್ದರೂ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವುದರ ಬಗ್ಗೆ ಆಕ್ರೋಶಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಬಿಪಿಎಲ್ ಕಾರ್ಡ್ ನಿಂದ ಪಡೆಯುತ್ತಿದ್ದ ಸೌಲಭ್ಯಗಳಿಗೂ ಕತ್ತರಿ ಬೀಳುವ ಆತಂಕದಲ್ಲಿ ಜನರಿದ್ದಾರೆ.
ಹೀಗಾಗಿ ಇಂದು ಮಾಧ್ಯಮಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ ಕಡಿತವಾಗುತ್ತಾ ಎಂಬ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ಗೃಹಲಕ್ಷ್ಮಿ ಹಣವೂ ಬಂದ್ ಆಗುತ್ತದಾ ಎಂಬ ಆತಂಕ ಬೇಡ ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಯಾರು ಬಿಪಿಎಲ್ ಮತ್ತು ಎಪಿಎಲ್ ಹೊಂದಿರುತ್ತಾರೋ ಮತ್ತು ಯಾರು ತೆರಿಗೆ ಕಟ್ಟುವುದಿಲ್ಲವೋ ಅವರಿಗೆ ಸಿಗುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹೀಗಾಗಿ ಈಗ ಬಿಪಿಎಲ್ ನಿಂದ ಎಪಿಎಲ್ ಗೆ ಬಂದರೂ ಅವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.