Publish Date: Sun, 14 Jul 2024 (08:00 IST)
Updated Date: Sun, 14 Jul 2024 (08:02 IST)
ಬೆಂಗಳೂರು: ಎಚ್ ಡಿ ರೇವಣ್ಣ ಕುಟುಂಬವಿಡೀ ಈಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಲುಗುತ್ತಿದೆ. ಇದರೊಂದಿಗೆ ದೇವೇಗೌಡರ ಕುಟುಂಬ ಸಂಕಷ್ಟದಲ್ಲಿದೆ. ಇದರ ನಡುವೆ ತಮ್ಮ ಮಗ ನಿಖಿಲ್ ನನ್ನೂ ಬಂಧಿಸಲು ಯೋಜನೆ ನಡೆದಿತ್ತು ಎಂಬ ಅಚ್ಚರಿಯ ಅಂಶವನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.
ದೇವೇಗೌಡರ ಕುಟುಂಬದಲ್ಲಿ ನಿಖಿಲ್ ಮಾತ್ರ ಬಾಕಿಯಿದ್ದ. ಅವನನ್ನೂಯಾವುದಾದರೂ ಕೇಸ್ ನಲ್ಲಿ ಸಿಲುಕಿಸಿ ಬಂಧಿಸಲು ಎಲ್ಲಾ ತಯಾರಿ ನಡೆಸಿತ್ತು. ಇದಕ್ಕೆ ರಾಜ್ಯ ಸರ್ಕಾರ ಮತ್ತು ಡಿಜಿ ಮಟ್ಟದ ಪೊಲೀಸ್ ಅಧಿಕಾರಿಯೇ ಚರ್ಚೆಯನ್ನೂ ನಡೆಸಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತ ಅವನನ್ನು ಬಂಧಿಸಲು ತಯಾರಿ ನಡೆದಿತ್ತು ಎಂದಿದ್ದಾರೆ. ರಾಜ್ಯದಲ್ಲಿರುವ ಈ ಸರ್ಕಾರದಲ್ಲಿ ಹಗರಣಗಳೇ ತುಂಬಿ ತುಳುಕುತ್ತಿದೆ. ಇದು ಬೇರೆ ರಾಜ್ಯಗಳಲ್ಲೂ ಚರ್ಚೆಯಾಗುತ್ತಿದೆ. ನಾನು ಎರಡು ದಿನ ಆಂಧ್ರ, ತೆಲಂಗಾಣದಲ್ಲಿ ಪಬ್ಲಿಕ್ ಸೆಕ್ಟರ್ ಯುನಿಟ್ ಗಳ ಬಗ್ಗೆ ಚರ್ಚಿಸಲು ಹೋಗಿದ್ದಾಗ ಈ ವಿಚಾರ ಪ್ರಸ್ತಾಪವಾಗಿದೆ.
ಅಲ್ಲಿನ ಎಂಪಿಗಳು, ಶಾಸಕರು ಇಲ್ಲಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ಹೇಳಿಕೊಂಡಾಗ ನೋವಾಯಿತು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದ ಪರಿಸ್ಥಿತಿ ಯಾವ ರೀತಿ ಇದೆ ಎಂದು ಗೊತ್ತಾಗುತ್ತಿದೆ. ಬೇರೆ ರಾಜ್ಯದವರೂ ನಮ್ಮ ರಾಜ್ಯದ ಬಗ್ಗೆ ಮಾತನಾಡುವಂತಾಗಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.