ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ತೀವ್ರವಾಗಲಿದ್ದು, ಉತ್ತರ ಕನ್ನಡ ಜಿಲ್ಲೆಗೆ ಭಾರೀ ಮಳೆಯ ಕಾರಣ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಮಳೆ ಹೇಗಿದೆ ಎಂಬ ವಿವರ ಇಲ್ಲಿದೆ.
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಮಳೆಯಾಗುತ್ತಲೇ ಇದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು, ಮತ್ತಷ್ಟು ತೀವ್ರವಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಮುಂದಿನ ಮೂರು ದಿನಗಳ ಕಾಲ ಮತ್ತಷ್ಟು ಮಳೆಯಾಗಲಿದೆ ಎನ್ನಲಾಗಿದೆ.
ಉತ್ತರ ಕನ್ನಡದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿರಂತರ ಮಳೆಯಾಗುವ ಸೂಚನೆಯಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಕಾರವಾರ ಮತ್ತು ಮಲೆನಾಡಿನಲ್ಲೂ ಮಳೆಯ ವಾತಾವರಣ ಮುಂದುವರಿಯಲಿದೆ. ಉತ್ತರ ಕನ್ನಡದಲ್ಲಿ ಸೋಮವಾರದವರೆಗೆ ಭಾರೀ ಮಳೆಯಾಗಲಿದೆ. ಕರಾವಳಿಯಲ್ಲಿ 200 ಎಂಎಂನಷ್ಟು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಭಾರೀ ಮಳೆಯಿಂದಾಗಿ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲೂ ಮಳೆಯ ವಾತಾವರಣವಿದೆ. ನಿನ್ನೆ ಸಂಜೆ ಬಹುತೇಕ ಕಡೆ ಭಾರೀ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಜನರಿಗೆ ಓಡಾಡಲು ಕಷ್ಟವಾದ ಪರಿಸ್ಥಿತಿ ಎದುರಾಗಿತ್ತು. ಇಂದೂ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆಯ ವೇಳೆಗೆ ಮಳೆಯಾಗುವ ನಿರೀಕ್ಷೆಯಿದೆ.