Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ಯಾವುದೇ ಕ್ಷಣದಲ್ಲೂ ಬಿದ್ದು ಹೋಗುತ್ತದೆ: ಬಿವೈ ವಿಜಯೇಂದ್ರ

Karnataka BJP

Krishnaveni K

ಬೆಂಗಳೂರು , ಶುಕ್ರವಾರ, 12 ಜುಲೈ 2024 (13:21 IST)
ಬೆಂಗಳೂರು: ಮೈಸೂರು ಮುಡಾ ಹಗರಣವನ್ನು ಖಂಡಿಸಿ ಮೈಸೂರು ಚಲೋ ನಡೆಸುತ್ತಿರುವ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬಂಧಿಸುವ ಪ್ರಯತ್ನ ಖಂಡನೀಯ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.

ಮೈಸೂರಿಗೆ ತೆರಳಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಬಂಧನದ ಮೂಲಕ ರಾಜ್ಯಾದ್ಯಂತ ಬೆಂಕಿ ಹಚ್ಚಲು ನೀವೇ ಕಾರಣವಾಗುತ್ತೀರಿ ಎಂದು ಅವರು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ನಾಗೇಂದ್ರ ಅವರು ಇ.ಡಿ. ಬಂಧನಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ. ದಲಿತರ ಹಣ ಲೂಟಿ ಮಾಡಿದ್ದೀರಿ; ಅಲ್ಲದೆ ದಲಿತರು, ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಲಪಟಾಯಿಸಿದ್ದೀರಿ. ಇದನ್ನು ಸಿಬಿಐ ತನಿಖೆಗೆ ಕೊಡಬೇಕಲ್ಲದೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮುಡಾದಲ್ಲಿ ಸಾವಿರಾರು ಕೋಟಿಗೂ ಮೀರಿದ ದೊಡ್ಡ ಹಗರಣ ಬಯಲಾಗಿದೆ. ಇದರಿಂದ
ಮುಖ್ಯಮಂತ್ರಿಗಳು ಆತಂಕಗೊಂಡಿದ್ದಾರೆ. ಮೈಸೂರಿನಲ್ಲಿ ಮುಡಾ ಎದುರು ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಆದೇಶದ ಮೇರೆಗೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಪ್ರಾಮಾಣಿಕರಿದ್ದರೆ, ಮುಡಾದಲ್ಲಿ ಭ್ರಷ್ಟಾಚಾರ ಆಗಿಲ್ಲ ಎನ್ನುವುದಾದರೆ, ಜಿಲ್ಲಾಧಿಕಾರಿಗಳ ವರದಿಯ ಬಳಿಕವೂ ಭ್ರಷ್ಟಾಚಾರ ಆಗಿಲ್ಲವೆಂದಾದರೆ ನಿಷ್ಪಕ್ಷಪಾತ ತನಿಖೆ ನಡೆಸಿ; ಇದನ್ನು ಸಿಬಿಐ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದರು.
 
ಯಾವುದೇ ಕ್ಷಣದಲ್ಲೂ ಸರಕಾರ ಬೀಳಬಹುದು..
ಸಿದ್ದರಾಮಯ್ಯರ ಸರಕಾರ ದಬ್ಬಾಳಿಕೆ ಮಾಡುತ್ತಿದೆ. ತುಘಲಕ್ ದರ್ಬಾರ್ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. ಬಿಜೆಪಿ, ಬಿಜೆಪಿಯ ಕಾರ್ಯಕರ್ತರು ಇದೆಲ್ಲದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಸರಕಾರದ ಪಾಪದ ಕೊಡ ತುಂಬಿದೆ. ಯಾವುದೇ ಕ್ಷಣದಲ್ಲೂ ಸರಕಾರ ಬೀಳಬಹುದು ಎಂದು ವಿಜಯೇಂದ್ರ ಅವರು ತಿಳಿಸಿದರು.

ಹೋರಾಟ ಹತ್ತಿಕ್ಕುವುದು ಅಕ್ಷಮ್ಯ ಅಪರಾಧ. ಬೆಳಗ್ಗೆ 7 ಗಂಟೆಗೇ ನಮ್ಮ ಮುಖಂಡರನ್ನು ಬಂಧಿಸಿದ್ದಾರೆ. ನೈಸ್ ರಸ್ತೆ ಬಳಿ ನಮ್ಮ ಬ್ಯಾನರ್, ಬಾವುಟಗಳನ್ನು ಕಿತ್ತು ಬಿಸಾಕಿ, ಕಾರ್ಯಕರ್ತರಿಗೆ ಕೊಡಲು ತಂದ ತಿಂಡಿಯನ್ನೂ ಒದ್ದು ಬಿಸಾಕಿದ್ದಾರೆ ಆಕ್ಷೇಪಿಸಿದರು.
 
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ವಾಲ್ಮೀಕಿ ನಿಗಮದ ಹಣವನ್ನು ದೋಚಿ ಕಾಂಗ್ರೆಸ್ ಸರಕಾರವು ಚುನಾವಣೆಗೆ ಬಳಸಿದೆ. ರಾಜ್ಯವನ್ನು ಕಾಂಗ್ರೆಸ್ ಎಟಿಎಂ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿಯವರಿಗೆ ದುಡ್ಡನ್ನು ಕರ್ನಾಟಕದಿಂದ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಮುಡಾ ಹಗರಣ ಮೂಲಕ ತಮ್ಮ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪುಡಾರಿಗಳಿಗೆ ನಿವೇಶನ ನೀಡಿದ 5 ಸಾವಿರ ಕೋಟಿಯ ಹಗರಣ ಇದಾಗಿದೆ. ಈ ಮೂಲಕ ಕಾಂಗ್ರೆಸ್ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಿ ಎಂದು ಅವರು ಒತ್ತಾಯಿಸಿದರು. ಆಗ ಮಾತ್ರವೇ ಈ ಹಗರಣದ ಸ್ಪಷ್ಟತೆ ಹೊರಬಂದು ನ್ಯಾಯ ಸಿಗಲು ಸಾಧ್ಯ ಎಂದು ಅವರು ನುಡಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಹಗರಣ ಹೋರಾಟ: ಬಿಜೆಪಿ ಪ್ರಮುಖ ನಾಯಕರ ಬಂಧನ