ಬಳ್ಳಾರಿ: ಬಳ್ಳಾರಿಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಸ್ಪೋಟಕ ವಿಚಾರಗಳನ್ನು ಹೊರಹಾಕಿದ್ದಾರೆ.
ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆಯಾಗಿತ್ತು. ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ಈ ವೇಳೆ ಗುಂಡು ಹಾರಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದ. ಇದೀಗ ಪೊಲೀಸ್ ತನಿಖೆಯಲ್ಲೂ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳಿಂದಲೇ ಗುಂಡು ಹಾರಿದ್ದು ಎನ್ನುವುದು ಪಕ್ಕಾ ಆಗಿತ್ತು.
ಈ ಬಗ್ಗೆ ಇಂದು ಮಾಧ್ಯಮಗೋಷ್ಠಿಯಲ್ಲಿ ಕುಮಾರಸ್ವಾಮಿ ಹಲವು ಸ್ಪೋಟಕ ವಿಚಾರಗಳನ್ನು ಹೊರಹಾಕಿದ್ದಾರೆ. ಮೃತ ಕಾಂಗ್ರೆಸ್ ಕಾರ್ಯಕರ್ತನ ಮರಣೋತ್ತರ ಪರೀಕ್ಷೆಯನ್ನು ಎರಡೆರಡು ಬಾರಿ ನಡೆಸಲಾಗಿದೆ. ಮೊದಲ ಪರೀಕ್ಷೆ ವೇಳೆ ಗುಂಡು ಹೊರ ತೆಗೆಯಲೇ ಇಲ್ಲ ಎಂದು ಅವರು ಸ್ಪೋಟಕ ವಿಚಾರ ಹೇಳಿದ್ದಾರೆ.
ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ಕೇವಲ ಎಸ್ ಪಿಯನ್ನು ಅಮಾನತು ಮಾಡಲಾಗಿದೆ. ಘಟನೆಯಲ್ಲಿ ಐಜಿ, ಡಿವೈಎಸ್ ಪಿ, ಎಎಸ್ಪಿ ಅವರನ್ನು ಯಾಕೆ ಅಮಾನತು ಮಾಡಲಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಜನಾರ್ಧನ ರೆಡ್ಡಿ ಬಳ್ಳಾರಿಗೆ ಬಂದ ನಂತರ ಗಲಭೆಗಳಾಗುತ್ತಿವೆ. ನಾನು ಭರತ್ ಪರ ರೆಡ್ಡಿ ಪರ ನಿಲ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕೊಡ್ತಾರೆ. ಒಬ್ಬ ಡಿಸಿಎಂ ಆಗಿ ಈ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಲ್ವಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು, ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ಜಮೀರ್ ಅಹ್ಮದ್ 25 ಲಕ್ಷ ರೂ ಪರಿಹಾರ ನೀಡಿದ್ದನ್ನೂ ಅವರು ಪ್ರಶ್ನೆ ಮಾಡಿದ್ದಾರೆ. ಮೂಟೆಯಲ್ಲಿ 25 ಲಕ್ಷ ರೂ. ತೆಗೆದುಕೊಂಡು ಹೋಗಿ ಕೊಟ್ಟಿದ್ದಾರಲ್ವಾ? ಅದು ಯಾರ ಹಣ? ಅದರ ಮೂಲ ಯಾವುದು? ಖಾಸಗಿಯಾ, ಸರ್ಕಾರದ ಹಣವಾ ಎಂದು ಪ್ರಶ್ನೆ ಮಾಡಿದ್ದಾರೆ.