ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಡುವಿನ ತಿಕ್ಕಾಟ ಜೋರಾಗಿದೆ. ಈಗ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಬಂಗಾರಪ್ಪ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯದೇ ಇದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿವೈ ವಿಜಯೇಂದ್ರ ದೆಹಲಿಗೆ ತೆರಳಿ ಹೈಕಮಾಂಡ್ ಗೆ ದೂರು ನೀಡಿದ್ದರು. ಹೀಗಾಗಿ ಈಗ ಯತ್ನಾಳ್ ಗೆ ಕಾರಣ ಕೇಳಿ ಹೈಕಮಾಂಡ್ ನೋಟಿಸ್ ನೀಡಿದೆ. ಇದಕ್ಕೆ ಶೀಘ್ರದಲ್ಲೇ ಉತ್ತರಿಸುವುದಾಗ ಯತ್ನಾಳ್ ಕೂಡಾ ಪ್ರತಿಕ್ರಿಯಿಸಿದ್ದಾರೆ.
ಯತ್ನಾಳ್ ಬಣದಲ್ಲಿ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಸೇರಿದಂತೆ ಕೆಲವು ಬಿಜೆಪಿ ನಾಯಕರಿದ್ದಾರೆ. ಇವರಿಗೆ ಯಾರಿಗೂ ವೈಯಕ್ತಿಕವಾಗಿ ನೋಟಿಸ್ ಬಂದಿಲ್ಲ. ಯತ್ನಾಳ್ ಗೆ ಮಾತ್ರ ನೋಟಿಸ್ ನೀಡಲಾಗಿದೆ. ಈ ಸಂಬಂಧ ಮಾಧ್ಯಮಗಳಿಗೆ ಕುಮಾರ್ ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಬಿವೈ ವಿಜಯೇಂದ್ರ ಮಾಡುತ್ತಿರುವ ಹೊಂದಾಣಿಕೆ ರಾಜಕಾರಣ ನಿಲ್ಲಬೇಕಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯದೇ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ. ಇನ್ನು, ತಮಗೆ ವೈಯಕ್ತಿಕವಾಗಿ ನೋಟಿಸ್ ಬಂದಿಲ್ಲ. ಒಂದು ವೇಳೆ ಬಂದರೂ ಹೆದರಲ್ಲ. ನಾವು ಬಂಗಾರಪ್ಪನವರ ಮಕ್ಕಳು. ಬಂಗಾರಪ್ಪನವರ ಮಕ್ಕಳನ್ನು ಹೆದರಿಸಕ್ಕೆ ಆಗುತ್ತಾ. ನೋಟಿಸ್ ಬಂದರೆ ಉತ್ತರ ಕೊಡ್ತೇನೆ ಎಂದಿದ್ದಾರೆ.