Publish Date: Tue, 18 Aug 2026 (09:56 IST)
Updated Date: Tue, 18 Aug 2026 (09:59 IST)
ಬೆಂಗಳೂರು: ರಾಜ್ಯದ ಸಾಮಾನ್ಯ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಆಘಾತ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೀಘ್ರದಲ್ಲೇ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ನಿರಂತರವಾಗಿ ಏರಿಕೆಯಾಗುತ್ತಿರುವ ಡೀಸೆಲ್ ದರ ಹಾಗೂ ಸಾರಿಗೆ ಸಂಸ್ಥೆಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟವೇ ಈ ದರ ಪರಿಷ್ಕರಣೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಬಸ್ ದರ ಹೆಚ್ಚಳದ ಕುರಿತು ಈಗಾಗಲೇ ಸಾರಿಗೆ ಸಚಿವ ಬೈರತಿ ಸುರೇಶ್ ಮಹತ್ವದ ಸುಳಿವು ನೀಡಿದ್ದಾರೆ.
ಬಸ್ ಪ್ರಯಾಣ ದರ ಪರಿಷ್ಕರಣೆ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ "ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ"ಯನ್ನು ರಚಿಸಲಾಗಿದೆ. ಈ ಸಮಿತಿಯು ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಕಾರ್ಯನಿರ್ವಹಣಾ ವೆಚ್ಚ ಹಾಗೂ ಸಾರ್ವಜನಿಕರ ಮೇಲಾಗುವ ಪರಿಣಾಮಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದೆ.
ಸಚಿವ ಬೈರತಿ ಸುರೇಶ್ ಹೇಳಿದ್ದೇನು?
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, "ಕಳೆದ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಿದ ನಂತರ ಡೀಸೆಲ್ ದರ ಹಲವು ಬಾರಿ ಏರಿಕೆಯಾಗಿದೆ. ಆದರೆ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ದರ ಹೆಚ್ಚಿಸಿರಲಿಲ್ಲ. ಇದರಿಂದಾಗಿ ನಾಲ್ಕು ಸಾರಿಗೆ ನಿಗಮಗಳು ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ನಷ್ಟ ಎದುರಿಸುತ್ತಿವೆ. ಸಾರಿಗೆ ಸಂಸ್ಥೆಗಳನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಸಣ್ಣ ಪ್ರಮಾಣದ ದರ ಏರಿಕೆ ಅನಿವಾರ್ಯವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ಸಾರಿಗೆ ದರ ಏರಿಕೆಯು ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ. ಪ್ರತಿ ದಿನ KSRTC ಹಾಗೂ BMTC ಬಸ್‌ಗಳನ್ನೇ ಅವಲಂಬಿಸಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸಂಭಾವ್ಯ ದರ ಏರಿಕೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ವರದಿಯ ಪ್ರಕಾರ, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಹಾಗೂ ಸಾರಿಗೆ ನಿಗಮಗಳ ನಷ್ಟವನ್ನು ಸರಿದೂಗಿಸುವ ರೀತಿಯಲ್ಲಿ ಮಧ್ಯಮ ಮಾರ್ಗದ ದರ ಏರಿಕೆಯನ್ನು ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ