ಬೆಂಗಳೂರು: ಶಕ್ತಿ ಯೋಜನೆಯಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಲಾಭದಲ್ಲಿದೆ ಎನ್ನುತ್ತಿದ್ದ ಸಾರಿಗೆ ಸಚಿವರೇ ಈಗ ಸದನದಲ್ಲಿ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಕರ್ನಾಟಕ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿದೆ. ಆದರೆ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಲೇ ಇದ್ದವು. ಆದರೆ ಆಗೆಲ್ಲಾ ಸಚಿವರು ಶಕ್ತಿ ಯೋಜನೆಯಿಂದ ಲಾಭವೇ ಆಗಿದೆ ಎನ್ನುತ್ತಿದ್ದರು.
ಆದರೆ ಇಂದು ಎಂಎಲ್ ಸಿ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ ಯಾವ ನಿಗಮಕ್ಕೆ ಎಷ್ಟು ನಷ್ಟವಾಗಿದೆ ಎಂಬ ಉತ್ತರ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೆಎಸ್ ಆರ್ ಟಿಸಿಗೆ 1500 ಕೋಟಿ ರೂ., ಬಿಎಂಟಿಸಿ 1544 ಕೋಟಿ ರೂ., ಕೆಕೆಆರ್ ಟಿಸಿಗೆ 777 ಕೋಟಿ ರೂ., ಎನ್ ಡಬ್ಲ್ಯುಕೆಆರ್ ಟಿಸಿಗೆ 1386 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ನಮ್ಮಲ್ಲಿ ಮಾತ್ರವಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಬಸ್ ನಿಗಮಗಳು ನಷ್ಟದಲ್ಲಿವೆ. ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ಣ ಮೊತ್ತ ಪಾವತಿಯಾಗಬೇಕಿದೆ. ಶೇ. 40 ರಷ್ಟು ಬಸ್ ಗಳು ನಷ್ಟದಲ್ಲೇ ಓಡುತ್ತಿವೆ. ಶೇ.30 ರಷ್ಟು ಬಸ್ ಗಳು ಲಾಭದಲ್ಲಿವೆ.
ಶಕ್ತಿ ಯೋಜನೆಯಿಂದ ಎಷ್ಟು ನಷ್ಟವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಶಕ್ತಿ ಯೋಜನೆಗೆ ಒಟ್ಟು 9978 ಕೋಟಿ ರೂ. ಖರ್ಚಾಗಿದೆ. 448 ಬಿಎಂಟಿಸಿ ಬಸ್ ಖರೀದಿ ಮಾಡಿದ್ದೇವೆ. ಹೊಸದಾಗಿ 5,360 ಬಸ್ ಖರೀದಿ ಮಾಡಿದ್ದೇವೆ. 40 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿಯಿಂದ 650 ರೂ. ಪಡೆಯಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.