ಬೆಂಗಳೂರು: ಈ ಹಿಂದೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಮಗನನ್ನೇ ಕಣಕ್ಕಿಳಿಸಿ ಜೆಡಿಎಸ್ ಮುಗಿಸಲು ಬಿಜೆಪಿ ಸ್ಕೆಚ್ ಹಾಕಿತ್ತು ಎಂದು ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ಯಾವ ವಿರೋಧ ಪಕ್ಷದವರನ್ನೂ ದಮನಿಸಲು ಪ್ರಯತ್ನ ನಡೆಸಿಲ್ಲ ಎಂದಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಡುವವರು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೂ ಅದರದ್ದೇ ಆದ ಸ್ಥಾನವಿದೆ. ಎಲ್ಲಾ ಪಕ್ಷಗಳೂ ಬೇಕು. ಅದೇ ರೀತಿ ಜೆಡಿಎಸ್ ನವರೂ ಇರಲಿ, ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.
ನಾವು ಯಾವ ಪಕ್ಷವನ್ನೂ, ನಾಯಕರನ್ನೂ ಮುಗಿಸಲು ಸ್ಕೆಚ್ ಹಾಕಿಲ್ಲ. ಆದರೆ ಬಿಜೆಪಿಯವರು ಈ ಹಿಂದೆ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ನಿಲ್ಲಿಸುವಂತೆ ಮಾಡಿ ಜೆಡಿಎಸ್ ಮುಗಿಸಲು ಸ್ಕೆಚ್ ಹಾಕಿದ್ದರು. ಕುಮಾರಸ್ವಾಮಿ ಮೂಲಕ ಮಗನನ್ನು ಚುನಾವಣೆಗೆ ನಿಲ್ಲಿಸುವಂತೆ ಮಾಡಿದರು ಎಂದಿದ್ದಾರೆ.
ಇನ್ನು ಬಳ್ಳಾರಿ ಬಾಣಂತಿ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಳಪೆ ಔಷಧ ಪೂರೈಸಿದ ಕಂಪನಿಗಳ ವಿರುದ್ಧ ತಕ್ಕ ಕ್ರಮ ಕೈಗೊಳ್ಳುತ್ತೇವೆ. ಯಾರು ತಪ್ಪಿತಸ್ಥರಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇವೆ. ಇಂತಹದ್ದೊಂದು ದುರಂತ ಆಗಬಾರದಿತ್ತು. ಇದಕ್ಕೆ ಪರಿಹಾರ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದಿದ್ದಾರೆ.