Publish Date: Tue, 24 Aug 2021 (12:03 IST)
Updated Date: Tue, 24 Aug 2021 (12:06 IST)
ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ರಾಜೀನಾಮೆಗೆ ನಿರ್ಧರಿಸಿದ್ದು, ಇಂದೇ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತಮಗೆ ನೀಡಿರುವ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಬದಲಾಗಿ ಪ್ರಬಲ ಖಾತೆ ನೀಡುವಂತೆ ಪಟ್ಟು ಹಿಡಿದಿರುವ ಆನಂದ್ ಸಿಂಗ್ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಹಲವು ಬಾರಿ ಮನವೊಲಿಕೆಗೆ ಯತ್ನಿಸಿದ್ದು, ಕೊಟ್ಟ ಖಾತೆ ನಿಭಾಯಿಸುವಂತೆ ಸಲಹೆ ನೀಡಿದ್ದರು. ಆದರೂ ಹಠ ಮುಂದುವರೆಸಿರುವ ಆನಂದ್ ಸಿಂಗ್ ದೆಹಲಿಗೆ ತೆರಳಿ ಹೈಕಮಾಂಡ್ ಕೂಡ ಭೇಟಿಯಾಗಿದ್ದರು. ಇಷ್ಟಾದರೂ ತಾವು ಕೇಳಿರುವ ಖಾತೆ ನೀಡಿಲ್ಲ ಎಂಬ ಮುನಿಸು ಆನಂದ್ ಸಿಂಗ್ ಅವರಲ್ಲಿದ್ದು, ರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಆನಂದ್ ಸಿಂಗ್ ಆಪ್ತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.