ಬೆಂಗಳೂರು: ಗೂಂಡಾ ಕಾಯ್ದೆಯಡಿ ನಗರದ ಕಾರ್ತಿಕ್ ಅಲಿಯಾಸ್ ಉಲ್ಲಾಳು ಕಾರ್ತಿಕ್‌ನನ್ನು ಬಂಧಿಸಲು ಹೊರಡಿಸಿದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ 25 ಸಾವಿರ ರೂ. ದಂಡ ವಿಧಿಸಿದೆ.
ಗೂಂಡಾ ಕಾಯ್ದೆಯಡಿ ತನ್ನನ್ನು ಬಂಧಿಸಲು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಮತ್ತು ಅದನ್ನು ಅನುಮೋದಿಸಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕಾರ್ತಿಕ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಕಾರ್ತಿಕ್‌ನನ್ನು ಗುಂಡಾ ಕಾಯ್ದೆಯಡಿ ಬಂಧಿಸಲು 2020ರ ಡಿ.14ರಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಆ ಕುರಿತು ವಿಚಾರಣೆ ನಡೆಸಿದ ಸಲಹಾ ಸಮಿತಿ ಎದುರು ಹಾಜರಾಗಿದ್ದ ಕಾರ್ತಿಕ್ ಸಲಹಾ ಸಮಿತಿ, ಗೂಂಡಾ ಕಾಯ್ದೆಯಡಿ ಬಂಧಿಸಲು ಹೊರಡಿಸಿರುವ ಆದೇಶ ಸರಿಯಲ್ಲ. ಅದನ್ನು ಪರಿಗಣಿಸಬಾರದು ಎಂದು ಕೋರಿ 2021ರ ಜ.12ರಂದು ಮನವಿ ಸಲ್ಲಿಸಿದ್ದ. ಆ ಮನವಿ ಪತ್ರವನ್ನು ಸಲಹಾ ಸಮಿತಿ ಪರಿಗಣಿಸಿರಲಿಲ್ಲ. ಸಮಿತಿಯ ವರದಿ ಆಧರಿಸಿದ ಸರ್ಕಾರವು ಕಾರ್ತಿಕ್‌ನನ್ನು ಗೂಂಡಾ ಕಾಯ್ದೆಯಡಿ ಒಂದು ವರ್ಷದವರೆಗೆ ಬಂಧಿಸಲು ನಗರ ಪೊಲೀಸರು ಹೊರಡಿಸಿದ ಆದ್ದೇಶವನ್ನು 2021ರ ಜ.30ರಂದು ಅನುಮೋದಿಸಿತ್ತು.
ಆದರೆ, ಸರ್ಕಾರವು ಈ ಅರ್ಜಿಗೆ ಮೊದಲ ಬಾರಿಗೆ ಸಲ್ಲಿಸಿದ ಆಕ್ಷೇಪಣೆಯ ಜತೆಗೆ ಕಾರ್ತಿಕ್ ಮನವಿ ಪತ್ರವನ್ನೂ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ನಂತರ ಸಲ್ಲಿಸಿದ ಹೆಚ್ಚುವರಿ ಆಕ್ಷೇಪಣೆಯಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ್ ಅವರ ಪ್ರಮಾಣ ಪತ್ರ ಒದಗಿಸಿ, ಸಲಹಾ ಸಮಿತಿಗೆ ಮನವಿ ಪತ್ರ ಸಲ್ಲಿಸಿರುವ ಬಗ್ಗೆ ಕಾರ್ತಿಕ್ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿಸಿದೆ. ಸರ್ಕಾರದ ಈ ನಡೆ ನಿಜಕ್ಕೂ ವಿಚಿತ್ರವಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್ ಸಾಮಾನ್ಯವಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.