Publish Date: Thu, 23 Apr 2026 (20:29 IST)
Updated Date: Thu, 23 Apr 2026 (20:32 IST)
ಬೆಂಗಳೂರು: ಪದವಿ ಮುಗಿಸಿ ಕೆಲಸಕ್ಕಾಗಿ ಕಾಯುತ್ತಿರುವ ಯುವ ಸಮೂಹಕ್ಕೆ ಆರ್ಥಿಕ ಶಕ್ತಿ ನೀಡುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆ ಯಶಸ್ವಿಯಾಗಿ ಮೂರು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ತೇರ್ಗಡೆಯಾದ ಹೊಸ ಪದವೀಧರರು ತಡಮಾಡದೆ ಯೋಜನೆಯಡಿ ನೋಂದಾಯಿಸಿಕೊಂಡು ಭತ್ಯೆ ಪಡೆಯುವಂತೆ ಶಾಸಕ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಕಾಂಗ್ರೆಸ್ ಪಕ್ಷವು ಸದಾ ಜನಪರ ಚಿಂತನೆಯುಳ್ಳದ್ದು ಎಂಬುದು ಪದೇ ಪದೆ ಸಾಬೀತಾಗುತ್ತಲೇ ಬಂದಿದೆ. ಚುನಾವಣೆಗೆ ಮೊದಲು ಘೋಷಿಸಿದಂತೆ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದಾ ಮುಂದಿದ್ದಾರೆ. ಅವರಿಗೆ ಸಮಸ್ತ ನಾಡಿನ ಜನತೆ ಪರವಾಗಿ ಅಭಿನಂದನೆಗಳು. ಈ ಯುವನಿಧಿ ಯೋಜನೆಯಿಂದ ಸಾಕಷ್ಟು ಪದವೀಧರ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಅವರು ದೂರದ ನಗರಗಳಿಗೆ ಹೋಗಿ ಉದ್ಯೋಗ ಹುಡುಕಿಕೊಳ್ಳಲು, ಸಣ್ಣ ಪುಟ್ಟ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ಇದರಿಂದ ಸಾಕಷ್ಟು ಸಹಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಫಲಾನುಭವಿಗಳು ಪ್ರತಿ ತಿಂಗಳು 1ನೇ ತಾರೀಖಿನಿಂದ 25ರೊಳಗೆ ತಾವು ಸ್ವ-ಉದ್ಯೋಗಿಯಲ್ಲವೆಂದು / ಉದ್ಯೋಗ ಮಾಡುತ್ತಿಲ್ಲವೆಂದು / ಉನ್ನತ ಶಿಕ್ಷಣ ಮಾಡುತ್ತಿಲ್ಲವೆಂದು ಸ್ವಯಂ ದೃಢೀಕರಣವನ್ನು ಮಾಡಬೇಕು. ಹೀಗೆ ಸ್ವಯಂ ದೃಢೀಕರಣವನ್ನು ಮಾಡಿಕೊಂಡವರಿಗೆ ಯುವನಿಧಿ ಭತ್ಯೆಯನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
₹950 ಕೋಟಿ ಭತ್ಯೆ ವಿತರಣೆ
ಯೋಜನೆ ಜಾರಿಗೆ ಬಂದಾಗಿನಿಂದ ಇಲ್ಲಿನವರೆಗೆ ಸರ್ಕಾರವು ಒಟ್ಟು 950,57,13,000 ರೂ. (ಅಂದಾಜು 950.57 ಕೋಟಿ ರೂ.) ಮೊತ್ತವನ್ನು ನಿರುದ್ಯೋಗಿ ಯುವಕರ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಯಶಸ್ವಿಯಾಗಿ ತಲುಪಿಸಿದೆ. ಈ ಬೃಹತ್ ಮೊತ್ತವು ರಾಜ್ಯದ ನಿರುದ್ಯೋಗಿ ಯುವಜನತೆಯ ಪಾಲಿಗೆ ಸಂಕಷ್ಟದ ಸಮಯದಲ್ಲಿ ದೊಡ್ಡ ಆಸರೆಯಾಗಿದೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
4.22 ಲಕ್ಷ ಅಭ್ಯರ್ಥಿಗಳ ನೋಂದಣಿ
ರಾಜ್ಯಾದ್ಯಂತ ಈವರೆಗೆ ಒಟ್ಟು 4,22,519 ಅಭ್ಯರ್ಥಿಗಳು ಯೋಜನೆಯ ಲಾಭ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಪದವೀಧರರು ಮಾತ್ರವಲ್ಲದೆ ಡಿಪ್ಲೋಮಾ ಮುಗಿಸಿದ ಯುವಕರೂ ಸೇರಿದ್ದಾರೆ ಎಂದು ಶಾಸಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಅರ್ಹತೆ ಮತ್ತು ನೋಂದಣಿ ಹೇಗೆ?
2022ರಿಂದ 2026ರವರೆಗಿನ ಶೈಕ್ಷಣಿಕ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಪೂರೈಸಿ, ಆರು ತಿಂಗಳು ಕಳೆದರೂ ಉದ್ಯೋಗ ಸಿಗದ ಎಲ್ಲರೂ ಅರ್ಜಿ ಸಲ್ಲಿಸಬಹುದು. ಅರ್ಹ ಪದವೀಧರರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೋಮಾ ಅಭ್ಯರ್ಥಿಗಳಿಗೆ 1,500 ರೂ. ಭತ್ಯೆ ನೀಡಲಾಗುತ್ತದೆ. ಹೀಗಾಗಿ ಈ ಬಾರಿ ಪದವಿ ಮುಗಿದವರು ಅರ್ಜಿ ಸಲ್ಲಿಸಬಹುದು ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ನೋಂದಣಿ ಹೇಗೆ?:
ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ (https://sevasindhu.karnataka.gov.in) ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂಧು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ