ಬೆಂಗಳೂರು: ರಾಜ್ಯದಲ್ಲಿ ಈ ವಾರ ಮಳೆಯಾಗುವ ಸಾಧ್ಯತೆ ಕಡಿಮೆ. ಆದರೆ ವಾರವಿಡೀ ತಾಪಮಾನದಲ್ಲಿ ಆಗುವ ಬದಲಾವಣೆ ತಪ್ಪದೇ ಗಮನಿಸಿ. ಈ ವಾರದ ಹವಾಮಾನ ವರದಿ ಇಲ್ಲಿದೆ ನೋಡಿ.
ಕಳೆದ ವಾರ ವಾಯುಭಾರ ಕುಸಿತದಿಂದ ಅಲ್ಲಲ್ಲಿ ಮಳೆಯಾಗಿತ್ತು. ಈ ವಾರ ಮಳೆಯ ಸಾಧ್ಯತೆ ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ಆದರೆ ತಾಪಮಾನ ಮಾತ್ರ ಕನಿಷ್ಠ ಮಟ್ಟಕ್ಕೆ ತಲುಪಲಿದೆ. ವರದಿಗಳ ಪ್ರಕಾರ ವಾರಂತ್ಯಕ್ಕೆ ವಿಪರೀತ ಎನಿಸುವಷ್ಟು ಚಳಿಯಿರಲಿದೆ.
ವಾರದ ಆರಂಭದಲ್ಲಿ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿರಲಿದೆ. ಆದರೆ ವಾರದ ಮಧ್ಯದಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಗೆ ತಲುಪಲಿದ್ದು, ವಾರಂತ್ಯವಾಗುತ್ತಿದ್ದಂತೇ ಇದು ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆಯಷ್ಟೇ. ಆದರೆ ಉಳಿದಂತೆ ಚಿಕ್ಕಮಗಳೂರು, ಕೊಡಗು, ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳು, ಉತ್ತರ ಕನ್ನಡ, ಕಲಬುರಗಿ, ಧಾರವಾಡ, ಬೆಳಗಾವಿ, ಯಾದಗಿರಿ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 16 ರಿಂದ 14 ಡಿಗ್ರಿಯವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮುಂದೆ ಚಳಿ ಮತ್ತಷ್ಟು ತೀವ್ರವಾಗುವುದು ಖಚಿತ ಎನ್ನಲಾಗಿದೆ.