ಬೆಂಗಳೂರು: ಕರ್ನಾಟಕದಲ್ಲಿ ಈಗ ಮುಂಗಾರು ಪೂರ್ವ ಮಳೆಯ ಅಬ್ಬರ ನಡೆಯುತ್ತಿದೆ. ಇಂದು ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸಾಧ್ಯತೆಗಳಿವೆ ಇಲ್ಲಿದೆ ಹವಾಮಾನ ವರದಿ.
ರಾಜ್ಯದಲ್ಲಿ ಸತತ ಬಿಸಿಲಿನ ನಡುವೆಯೂ ಕೆಲವೆಡೆ ಮಳೆಯಾಗುತ್ತಿದೆ. ಕಳೆದ ವಾರಂತ್ಯಕ್ಕೆ ಬೆಂಗಳೂರಿನಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿ ಹೋಗಿತ್ತು. ಆದರೆ ಅದಾದ ಬಳಿಕ ಕೆಲವೊಮ್ಮೆ ಮೋಡ ಕವಿದ ವಾತಾವರಣ ಬಿಟ್ಟರೆ ಬೆಂಗಳೂರಿನಲ್ಲಿ ಬಹುತೇಕ ಬಿಸಿಲಿನ ವಾತಾವರಣವಿದೆ. ಸ್ವಲ್ಪ ಮೋಡ ಕವಿದ ವಾತಾವರಣವಿರುವ ಕಾರಣಕ್ಕೆ ಬೆಂಗಳೂರಿನ ಸದ್ಯದ ಗರಿಷ್ಠ ತಾಪಮಾನ 31 ಡಿಗ್ರಿಯಷ್ಟಿದೆ. ಆದರೆ ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಲಿದೆ.
ಇನ್ನು, ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಬಳ್ಳಾರಿ, ರಾಯಚೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಬಿಸಿಲಿನ ಝಳ ಮಿತಿ ಮೀರಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಈಗಾಗಲೇ ಎರಡು ಮಳೆಯಾಗಿದೆ.
ಇಂದು ರಾಜ್ಯದ ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದೆ. ಸದ್ಯಕ್ಕೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 32 ಡಿಗ್ರಿಯಷ್ಟಿದೆ.