Publish Date: Sat, 21 Jun 2025 (08:27 IST)
Updated Date: Sat, 21 Jun 2025 (08:29 IST)
ಬೆಂಗಳೂರು: ರಾಜ್ಯದಲ್ಲಿ ಈಗ ಎರಡು ದಿನದಿಂದ ಮಳೆಯ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಇಂದು ಮಳೆಯ ಬರುವ ಸಾಧ್ಯತೆ ಎಷ್ಟಿದೆ ಎಂದು ಇಂದಿನ ಹವಾಮಾನ ವರದಿ ಗಮನಿಸಿ.
ಕಳೆದ ವಾರವಿಡೀ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿತ್ತು. ವಾರಂತ್ಯದ ವೇಳೆಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗಿತ್ತು. ಇದೀಗ ನಿನ್ನೆ ಮತ್ತು ಇಂದು ಈ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಅಪರೂಪಕ್ಕೆ ತುಂತುರು ಮಳೆ ಬಿಟ್ಟರೆ ಬಹುತೇಕ ಮೋಡ ಕವಿದ ವಾತಾವರಣವಿತ್ತು. ಇಂದೂ ಅದೇ ವಾತಾವರಣ ಮುಂದುವರಿಯಲಿದೆ. ಇಂದೂ ಮಳೆಯ ಸಾಧ್ಯತೆಯಿಲ್ಲ. ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿತ್ತು. ಆದರೆ ಇಂದು ಈ ಜಿಲ್ಲೆಗಳಲ್ಲಿ ತುಂತುರು ಮಳೆಯ ಸಾಧ್ಯತೆಯಿದೆಯಷ್ಟೇ.
ಉಳಿದಂತೆ ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಇಂದು ರಾಜ್ಯದ ಗರಿಷ್ಠ ಉಷ್ಣಾಂಶ 29 ಡಿಗ್ರಿಯಷ್ಟು ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿಯಷ್ಟಿರಲಿದೆ.