ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಕೆಲವು ಕಡೆ ವಿಪರೀತ ಮಳೆಯಾಗಿತ್ತು. ಈ ವಾರವೂ ಕೆಲವು ಜಿಲ್ಲೆಗಳಿಗೆ ಭರ್ಜರಿ ಮಳೆ ಕಾದಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡಕ್ಕೆ ಕಳೆದ ವಾರ ಭರ್ಜರಿ ಮಳೆಯಾಗಿತ್ತು. ಇದಲ್ಲದೆ ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರೀ ಮಳೆಯಾಗಿತ್ತು. ಇದರ ಹೊರತಾಗಿ ಬೆಂಗಳೂರು, ಮೈಸೂರಿನಲ್ಲಿ ಅಲ್ಪ ಪ್ರಮಾಣದ ಮಳೆಯಾಗಿತ್ತು.
ಈ ವಾರ ರಾಜ್ಯದ ಕೆಲವು ಜಿಲ್ಲೆಗಳಿಗೆ ಭರ್ಜರಿ ಮಳೆಯಾಗುವ ಸೂಚನೆಯಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ಈ ವಾರವೂ ಭಾರೀ ಮಳೆಯ ಸೂಚನೆಯಿದೆ. ಇಂದು ಕರ್ನಾಟಕದಲ್ಲಿ ಒಂದು ದಿನದ ಮಟ್ಟಿಗೆ ಮಳೆಗೆ ಬಿಡುವು. ಆದರೆ ನಾಳೆಯಿಂದ ಬಹುತೇಕ ಕಡೆ ಮಳೆಯಾಗುವ ಸೂಚನೆಯಿದೆ.
ದಕ್ಷಿಣ ಕನ್ನಡ, ಕೊಡಗಿನಲ್ಲಿ ಮಂಗಳವಾರದಿಂದ ಗುಡುಗು ಸಹಿತ ಮಳೆಯಾಗುವ ಸೂಚನೆಯಿದೆ. ಇನ್ನು, ಚಾಮರಾಜನಗರ, ಕೋಲಾರ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಈ ವಾರ ಕೆಲವು ದಿನ ಸಣ್ಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಈ ವಾರ ಬಿಸಿಲಿನ ತಾಪ ಮುಂದುವರಿಯಲಿದೆ.