ಬೆಂಗಳೂರು: ರಾಜ್ಯದಲ್ಲಿ ಈ ವಾರವಿಡೀ ಮಳೆಯ ಅಬ್ಬರ ಕೊಂಚ ಕಡಿಮೆಯೇ ಎನ್ನಬಹುದು. ಹಾಗಿದ್ದರೂ ಕೆಲವು ಜಿಲ್ಲೆಗಳಿಗೆ ಇಂದೂ ಮಳೆಯಾಗಲಿದೆ. ಮಳೆಗಾಗಿ ಕಾಯುತ್ತಿದ್ದರೆ ಇಂದಿನ ಹವಾಮಾನ ವರದಿಯನ್ನು ತಪ್ಪದೇ ಗಮನಿಸಿ.
ರಾಜ್ಯದಲ್ಲಿ ಕಳೆದ ವಾರ ಇದ್ದಷ್ಟು ಮಳೆ ಈ ವಾರ ಕಂಡುಬರುತ್ತಿಲ್ಲ. ನಿನ್ನೆಯೂ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಅಷ್ಟಾಗಿ ಮಳೆಯಿರಲಿಲ್ಲ. ಇಂದೂ ಬಹುತೇಕ ಅದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿಗೆ ಈ ಬಾರಿ ಮಳೆ ಕಡಿಮೆ. ಬದಲಾಗಿ ಮೋಡ ಕವಿದ ವಾತಾವರಣ ಅಥವಾ ತುಂತುರು ಮಳೆಯಿರುತ್ತದೆ. ಇಂದೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ತಕ್ಕಮಟ್ಟಿಗೆ ಮಳೆಯಾಗಲಿದೆ. ಉಳಿದಂತೆ ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಸೂಚನೆ ದೊರೆತಿದೆ. ಇಂದು ರಾಜ್ಯದ ಗರಿಷ್ಠ ಹವಾಮಾನ 29 ಡಿಗ್ರಿಯಷ್ಟಿರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿಯಷ್ಟಿರಲಿದೆ ಎಂದು ತಿಳಿದುಬಂದಿದೆ.