Publish Date: Mon, 25 Aug 2025 (08:26 IST)
Updated Date: Mon, 25 Aug 2025 (08:29 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಆರಂಭದಲ್ಲಿ ಮಳೆಯಾಗಿದ್ದರೆ ವಾರಂತ್ಯಕ್ಕೆ ಮಳೆಯ ಅಬ್ಬರ ಕಡಿಮೆಯಾಗಿತ್ತು. ಈ ವಾರ ಹವಾಮಾನ ಹೇಗಿರಲಿದೆ ಇಲ್ಲಿದೆ ಲೇಟೆಸ್ಟ್ ವರದಿ.
ಕಳೆದ ವಾರವಿಡೀ ರಾಜ್ಯದಲ್ಲಿ ಮಳೆ ಮತ್ತು ಮೋಡದ ನಡುವೆ ಕಣ್ಣಾಮುಚ್ಚಾಲೆಯಾಗಿತ್ತು. ಆದರೆ ಈ ವಾರದ ಆರಂಭದ ದಿನ ಅಂದರೆ ಇಂದು ಮಳೆಯ ಸಾಧ್ಯತೆ ಕಡಿಮೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ತಕ್ಕ ಮಟ್ಟಿಗೆ ಮಳೆಯಾಗಲಿದೆ.
ಆದರೆ ನಾಳೆಯಿಂದ ಬಹುತೇಕ ಕಡೆ ಮತ್ತೆ ಮಳೆಯಾಗಲಿದೆ. ಆಗಸ್ಟ್ 27 ರ ಬಳಿಕ ಮತ್ತೆ ರಾಜ್ಯದ ಬಹುತೇಕ ಕಡೆ ಮಳೆ ತೀವ್ರವಾಗಲಿದೆ ಎಂದು ಹವಾಮಾನ ವರದಿಗಳು ಹೇಳಿತ್ತು. ಅದರಂತೆ ಇಂದು ಬಹುತೇಕ ಕಡೆ ಮೋಡ ಕವಿದ ವಾತಾವರಣವಿದ್ದರೂ ನಾಳೆ ಸಾಧಾರಣ ಮಳೆಯ ಸಾಧ್ಯತೆಯಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಳೆ ಮಳೆಯ ಅಬ್ಬರ ಹೆಚ್ಚಾಗಲಿದೆ.
ಉಳಿದಂತೆ ಮಂಗಳವಾರದಿಂದ ವಾರಂತ್ಯದವರೆಗೂ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಯಾದಗಿರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಸ್ವಲ್ಪ ಮಳೆ ಮತ್ತು ಮೋಡ ಕವಿದ ವಾತಾವರಣವಿರಲಿದೆ.