ಬೆಂಗಳೂರು: ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನು ಕೆಲವೆಡೆ ಮೋಡ ಕವಿದ ವಾತಾವರಣವಿದೆ. ನಾಳೆಯವರೆಗೆ ಹವಾಮಾನದ ಈ ಎಚ್ಚರಿಕೆ ಸಂದೇಶವನ್ನು ತಪ್ಪದೇ ಗಮನಿಸಿ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಮಳೆಯಾಗುತ್ತಿದೆ. ಕಳೆದ ವಾರಂತ್ಯಕ್ಕೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವೂ ಆಗಿದ್ದರಿಂದ ಮೋಡ ಕವಿದ ವಾತಾವರಣದ ಜೊತೆಗೆ ಮಳೆಯಾಗುತ್ತಿತ್ತು.
ಈ ವಾರದ ಆರಂಭದಲ್ಲೂ ಮಳೆಯಾಗುತ್ತಿದೆ. ಇಂದೂ ಬಹುತೇಕ ಕಡೆ ಮಳೆಯಾಗಲಿದ್ದು ನಾಳೆಯವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಂಭವವಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ನಾಳೆಯವರೆಗೆ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ.
ಇಂದಿನವರೆಗೆ ಬೆಂಗಳೂರಿಗೂ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ. ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆ ನಿರೀಕ್ಷಿಸಲಾಗಿದೆ. ಮಳೆಯ ಜೊತೆಗೆ ವಿಪರೀತ ಗಾಳಿಯೂ ಇರಲಿದೆ. ನಾಳೆಯವರೆಗೂ ಭಾರೀ ಮಳೆಯ ಸಾಧ್ಯತೆಯಿದ್ದು, ಅದಾದ ಬಳಿಕ ಮಳೆಯ ಅಬ್ಬರ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ.