ಬೆಳ್ತಂಗಡಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕರಾವಳಿ ಭಾಗದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ಬಿಸಿಲ ಬೇಗೆಯಿಂದ ಬೇಸತ್ತ ಕರಾವಳಿ ಜನತೆಗೆ ವರುಣ ಇದೀಗ ತಂಪೆರೆದಿದ್ದಾನೆ.
ಕರ್ನಾಟಕದಲ್ಲಿ ಬಿಸಿಲ ತಾಪ ಏರುತ್ತಿದ್ದ ಹಾಗೇ ಪೂರ್ವ ಮುಂಗಾರು ಮಾರುಗಳು ರಾಜ್ಯವನ್ನು ಪ್ರವೇಶಿಸಿದೆ.
ಇಂದು ಕರಾವಳಿ ಭಾಗದಲ್ಲಿ ಭಾರೀ ಬಿಸಿಲಿನೊಂದಿಗೆ ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು. ಇಂದಿನ ಹವಾಮಾನ ಮುನ್ಸೂಚನೆಯಲ್ಲಿ ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಯಿತ್ತು ಎನ್ನಲಾಗಿತ್ತು. ಇದೀಗ ಬೆಳ್ತಂಗಡಿಯ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಬಿಸಿಲಿಗೆ ಸುಸ್ತಾಗಿದ್ದ ಜನತೆ ಆಲಿಕಲ್ಲು ಮಳೆಯ ಸಿಂಚನಕ್ಕೆ ಫುಲ್ ಖುಷ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಂಗಳವಾರ ಹಲವೆಡೆ ಸಂಜೆ ಸಾಧಾರಣ ಮಳೆಯಾಗಿತ್ತು.
ಇಂದು ಮಧ್ಯಾಹ್ನ ಬಿಸಿಲ ತಾಪ ಎಂದಿನಂತೆ ಇದ್ದು, ಸಂಜೆ ವೇಳೆ ಮೋಡ ಕವಿದ ವಾತವರಣವಿತ್ತು.