ಬೆಂಗಳೂರು: ರಾಜ್ಯದಲ್ಲಿ ಇಂದೂ ಕೆಲವು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ. ಈಗಾಗಲೇ ಜೂನ್ 12 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಇಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಿರಲಿದೆ ನೋಡಿ.
ವಿಶೇಷವಾಗಿ ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಲೇ ಇದೆ. ಇಂದೂ ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸೂಚನೆಯಿದೆ. ಇದರ ಜೊತೆಗೆ ಕೊಡಗು, ಚಿಕ್ಕಮಗಳೂರಿನಲ್ಲೂ ಇಂದು ಭಾರೀ ಮಳೆಯ ಸೂಚನೆಯಿದೆ.
ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಮುಂದಿನ ಒಂದು ವಾರ ನಿರಂತರ ಮಳೆಯಾಗುವ ಸೂಚನೆಯಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಬೀದರ್, ಬೆಳಗಾವಿ, ಗದಗ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳಲ್ಲೂ ಇಂದು ಮಳೆಯಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿಗೆ ಈ ಬಾರಿ ಅಷ್ಟೊಂದು ಮಳೆಯಾಗುತ್ತಿಲ್ಲ. ನಿನ್ನೆಯೂ ಬಹುತೇಕ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗಿತ್ತು. ಇಂದೂ ಹೆಚ್ಚು ಕಡಿಮೆ ಅದೇ ವಾತಾವರಣ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.