ಬೆಂಗಳೂರು: ಕಳೆದ ವಾರವಿಡೀ ರಾಜ್ಯಾದ್ಯಂತ ಭಾರೀ ಮಳೆಯಾಗಿತ್ತು. ಈ ವಾರ ರಾಜ್ಯದ ಯಾವ ಜಿಲ್ಲೆಗಳಿಗೆ ಹೆಚ್ಚು ಮಳೆಯಾಗಲಿದ, ಎಲ್ಲಿ ಮೋಡ ಕವಿದ ವಾತಾವರಣವಿರಲಿದೆ ಇಲ್ಲಿದೆ ವಾರದ ಹವಾಮಾನ ವರದಿ.
ಈ ಬಾರಿ ಕರಾವಳಿ ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ವಾರವೂ ಕರಾವಳಿ ಜಿಲ್ಲೆಗಳು ಮತ್ತು ಮಲೆ ನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಈ ವಾರವೂ ರಾಜ್ಯಾದ್ಯಂತ ಮಳೆಯ ವಾತಾವರಣ ಮುಂದುವರಿಯಲಿದೆ.
ಈ ವಾರವೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಿರಂತರವಾಗಿ ವಾರವಿಡೀ ಭಾರೀ ಮಳೆಯಾಗುವ ಸೂಚನೆಯಿದೆ. ಅದರಲ್ಲೂ ವಾರದ ಮಧ್ಯದಲ್ಲಿ ಮಳೆ ಇನ್ನಷ್ಟು ತೀವ್ರವಾಗಲಿದೆ. ಇಂದೂ ಈ ಜಿಲ್ಲೆಗಳಿಗೆ ಭಾರೀ ಮಳೆ ನಿರೀಕ್ಷೆಯಿದೆ.
ಇನ್ನು, ಬೆಂಗಳೂರಿನಲ್ಲಿ ವಾರಂತ್ಯದಲ್ಲಿ ಎರಡರಿಂದ ಮೂರು ದಿನ ಮಳೆಯಾಗುವ ನಿರೀಕ್ಷೆಯಿದೆ. ಉಳಿದಂತೆ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ತುಮಕೂರು ಜಿಲ್ಲೆಗಳಲ್ಲಿ ಈ ವಾರವಿಡೀ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಮೂರರಿಂದ ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ. ಉಳಿದ ದಿನ ಮೋಡ ಕವಿದ ವಾತಾವರಣವಿರಲಿದೆ.