Publish Date: Sun, 30 Aug 2026 (13:58 IST)
Updated Date: Sun, 30 Aug 2026 (14:00 IST)
ಬೆಂಗಳೂರು: ಸಾರ್ವಜನಿಕ ಉದ್ಯಾನವನದ ಶೇ. 5 ರಷ್ಟು ಭೂಮಿಯನ್ನು ಮೂಲಸೌಕರ್ಯ ಮತ್ತು ಇತರ ಯೋಜನೆಗಳಿಗೆ ಬಳಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಐತಿಹಾಸಿಕ ಲಾಲ್ ಬಾಗ್ ಸಸ್ಯತೋಟದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ವ್ಯಕ್ತವಾಯಿತು.
ನಗರದ ಆಮ್ಲಜನಕದ ಮೂಲಗಳಾಗಿರುವ ಹಸಿರು ವಲಯಗಳ ಅಸ್ತಿತ್ವಕ್ಕೆ ಧಕ್ಕೆ ತರಲಿರುವ 'ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ-2026' ಅನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಸಾರ್ವಜನಿಕರು, ಪರಿಸರಾಸಕ್ತರು ಹಾಗೂ ಬೆಳಗಿನ ವಾಯುವಿಹಾರಿಗಳು ಒಗ್ಗೂಡಿ ಬೃಹತ್ ರ‍್ಯಾಲಿ ನಡೆಸಿದರು.
ನೂರಾರು ಪ್ರತಿಭಟನಾಕಾರರೊಂದಿಗೆ ಕೈಜೋಡಿಸಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಸರ್ಕಾರದ ವಿವಾದಾತ್ಮಕ ವಿಧೇಯಕದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆಯ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ತಿದ್ದುಪಡಿಯು ನಗರದ ಹಸಿರು ಪರಂಪರೆಯ ಮೇಲಿನ ದಾಳಿ ಎಂದ ಅವರು, "ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನವನಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರವೇ ಅವುಗಳನ್ನು ಅತಿಕ್ರಮಿಸಲು, ಕೊಲ್ಲಲು ಹೊರಟಿರುವುದು ಕ್ಷಮಾರ್ಹವಲ್ಲ. ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಹಸಿರು ತಾಣಗಳು ಬೆಂಗಳೂರಿನ ಕೊನೆಯ ಪರಂಪರೆಯ ಉಳಿಕೆಗಳು. ಸರ್ಕಾರ ಇವುಗಳನ್ನು ನಾಶಮಾಡದೆ ಉಳಿಸಿಕೊಂಡರೆ ಸಾಕು," ಎಂದು ಆಕ್ರೋಶ ಹೊರಹಾಕಿದರು.
ನಗರದಲ್ಲಿ ಕೈಗೊಳ್ಳಲಾಗುತ್ತಿರುವ ಸುರಂಗ ರಸ್ತೆ ಯೋಜನೆ ಸೇರಿದಂತೆ ವೈಜ್ಞಾನಿಕವಲ್ಲದ ಮೂಲಸೌಕರ್ಯ ಯೋಜನೆಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾವು ಅಭಿವೃದ್ಧಿಯನ್ನು ಬಯಸುತ್ತೇವೆ, ಆದರೆ ಅದು ವೈಜ್ಞಾನಿಕ ಮತ್ತು ಸುಸ್ಥಿರವಾಗಿರಬೇಕು. ಗುತ್ತಿಗೆದಾರರ ಅಥವಾ ನಿರ್ದಿಷ್ಟ ರಾಜಕೀಯ ಪಕ್ಷದ ಲಾಭಕ್ಕಾಗಿ ಜನತೆಯ ಮೇಲೆ ಹೇರುವ ಯೋಜನೆಗಳ ಬದಲಿಗೆ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು," ಎಂದು ಪ್ರತಿಪಾದಿಸಿದರು.
ಸರ್ಕಾರ ತಕ್ಷಣವೇ ಈ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಬೆಂಗಳೂರಿನ ಉದ್ಯಾನವನಗಳಿಗೆ ಸಂಪೂರ್ಣ ಕಾನೂನು ರಕ್ಷಣೆ ನೀಡದಿದ್ದರೆ, ನಗರಾದ್ಯಂತ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ