ಬೆಂಗಳೂರು: ಸರ್ಕಾರೀ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪ ಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ ತಕ್ಷಣವೇ ಇಂದು ಸದನದಲ್ಲಿ ವಿಧೇಕಯ ಮಂಡನೆಯಾಗಿದೆ.
ಬಜೆಟ್ ಆಯವ್ಯಯಕ್ಕೆ ವಿಧಾನಮಂಡಲ ಅಂಗೀಕಾರವಾಗುವ ಮೊದಲೇ ಮುಸ್ಲಿಮರಿಗೆ ಮೀಸಲಾತಿ ವಿಧೇಯಕವನ್ನು ತ್ವರಿತವಾಗಿ ಮಂಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಆಯವ್ಯಯ ಅಂಗೀಕಾರದ ಬಳಿಕವೇ ವಿಧೇಯಕಗಳ ಮಂಡನೆಯಾಗುತ್ತದೆ. ಆದರೆ ಇಂದು ಸಚಿವ ಎಚ್ ಕೆ ಪಾಟೀಲ್ ಮೀಸಲಾತಿ ವಿಧೇಯಕ ಮಂಡಿಸಿದ್ದಾರೆ.
ಇದುವರೆಗೆ ಕೇವಲ ಎಸ್ ಸಿ, ಎಸ್ ಟಿ ಪಂಗಡದವರಿಗೆ ಮಾತ್ರ ಗುತ್ತಿಗೆಗಳಲ್ಲಿ ಮೀಸಲಾತಿಯಿತ್ತು. ಆದರೆ ಈಗ ಪ್ರವರ್ಗ ಬಿ ರ ಅಡಿಯಲ್ಲಿ ಮುಸ್ಲಿಮರಿಗೂ ಮೀಸಲಾತಿಯಿರಲಿದೆ. ಈ ವಿಧೇಯಕದ ಪ್ರಕಾರ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಗ್ರಾಮಸ್ವರಾಜ್ಯ ಮತ್ತು ಪಂಚಾಯತ್ ರಾಜ್, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಪುರಸಭೆ, ಪಟ್ಟಣ ಪಂಚಾಯತಿ, ನಗರಾಭಿವೃದ್ಧಿ ಪ್ರಾಧಿಕಾರಿಗಳ ಸರ್ಕಾರೀ ಗುತ್ತಿಗೆಗಳಲ್ಲಿ ಮೀಸಲಾತಿ ಜಾರಿಗೆ ಬರಲಿದೆ.
ಇನ್ನು, ವಿಧೇಯಕದ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಹಾಗಿದ್ದರೂ ಸರ್ಕಾರ ವಿಧೇಯಕ ಮಂಡಿಸುವಲ್ಲಿ ಯಶಸ್ವಿಯಾಗಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಎಚ್ ಕೆ ಪಾಟೀಲ್, ಬಿಜೆಪಿಯವರಿಗೆ ರಾಜಕೀಯ ಮಾಡುವುದೇ ಕೆಲಸ. ನಾವು ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಲು ಹೊರಟಿದ್ದೇವೆ. ಇದು ಯಾರ ತುಷ್ಠೀಕರಣವೂ ಅಲ್ಲ ಎಂದಿದ್ದಾರೆ.