ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಈ ಬಾರಿ ಮೈಸೂರು ದಸರಾ ಉದ್ಘಾಟನೆ ಮಾಡುತ್ತಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕನ್ನಡ ಭುವನೇಶ್ವರಿ ತಾಯಿಯನ್ನು ಪೂಜೆ ಮಾಡಲ್ಲ ಎಂದಿದ್ದ ಮತ್ತು ಅನ್ಯ ಧರ್ಮೀಯರಾದ ಬಾನು ಮುಷ್ತಾಕ್ ಹಿಂದೂಗಳ ಆರಾಧ್ಯ ದೈವ ಚಾಮುಂಡೇಶ್ವರಿ ತಾಯಿಗೆ ಪೂಜೆ ಮಾಡಬಾರದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಇತರೆ ಇಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಅರ್ಜಿಗಳನ್ನು ತಳ್ಳಿ ಹಾಕಿರುವ ಕೋರ್ಟ್ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದಕ್ಕೆ ಯಾವುದೇ ತಕರಾರಿಲ್ಲ ಎಂದಿದೆ. ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆಯಾಗಿರುವುದು ಕಂಡುಬಂದಿಲ್ಲ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಇದರಿಂದ ಪ್ರತಾಪ್ ಸಿಂಹ ಸೇರಿದಂತೆ ಬಾನು ಮುಷ್ತಾಕ್ ಉದ್ಘಾಟನೆ ವಿರೋಧಿಸುತ್ತಿರುವವರಿಗೆ ಹಿನ್ನಡೆಯಾದಂತಾಗಿದೆ. ಪೂಜಾರಿಯ ಪೂಜೆ ಹಕ್ಕು ಕಿತ್ತುಕೊಂಡಿದ್ದರೆ, ವ್ಯಕ್ತಿಯ ಆಸ್ತಿ ಕಿತ್ತುಕೊಂಡಿದ್ದರೆ ಪ್ರಶ್ನೆ ಮಾಡಬಹುದು. ಆದರೆ ಇಲ್ಲಿ ನಿಮ್ಮ ಯಾವ ಹಕ್ಕು ಕಿತ್ತುಕೊಳ್ಳಲಾಗಿದೆ ಎಂದು ಪ್ರತಾಪ್ ಸಿಂಹ ಪರ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.