ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಎರಡನೇ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
2015 ರಲ್ಲಿ ಸಂತ್ರಸ್ತೆ ಗಿರಿನಗರ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣ ಇದಾಗಿತ್ತು. ಇದೀಗ ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಜೂನ್ 11, 2024 ರಂದು ಪ್ರಕರಣದ ವಿಚಾರಣೆ ಮುಗಿಸಿ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಶ್ರೀಗಳ ಪರ ಪಿ.ಎನ್ ಮನಮೋಹನ್ ವಾದ ಮಂಡಿಸಿದ್ದರು. 2006 ರಲ್ಲಿ ಮಠದಲ್ಲಿ 10 ನೇ ತರಗತಿ ಓದುತ್ತಿದ್ದಾಗ ನಡೆದ ಚಾತುರ್ಮಾಸ ಸಂದರ್ಭದಲ್ಲಿ ಮತ್ತು 2012 ರ ಚಾತುರ್ಮಾಸ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ತಾವು ತಂಗಿದ್ದ ಕೊಠಡಿಗೆ ಕರೆಸಿಕೊಂಡು ಶ್ರೀಗಳು ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ದೂರುದಾರ ಮಹಿಳೆ ದೂರು ನೀಡಿದ್ದರು.
2021 ರಲ್ಲಿ ದೂರು ನೀಡಿದ್ದ ಮಹಿಳೆ ಪತಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದಾಗಿತ್ತು. ಮಹಿಳೆ ವೈವಾಹಿಕ ಸಮಸ್ಯೆಯಿಂದ ದೂರು ನೀಡಿದ್ದಾಳೆ. ಬಳಿಕ ದುರುದ್ದೇಶದಿಂದ ಅತ್ಯಾಚಾರ ದೂರು ನೀಡಿದ್ದಾರೆ ಎಂದು ವಕೀಲ ಮನಮೋಹನ್ ವಾದ ಮಂಡಿಸಿದ್ದರು.