ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕವಿಡೀ ಕಡುಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಈಗ ತಂಪೆರಚಲು ವರುಣನ ಆಗಮನವಾಗಲಿದೆ. ಕರ್ನಾಟಕದಲ್ಲಿ ಮಳೆ ಯಾವಾಗ ಇರಲಿದೆ ಎಂಬ ವಿವರ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಈಗ ತಾಪಮಾನ 35-40 ಡಿಗ್ರಿಯ ಆಸುಪಾಸಿನಲ್ಲಿದೆ. ಈಗಲೇ ಮೇ ತಿಂಗಳ ವಾತಾವರಣ ಕಂಡುಬರುತ್ತಿದೆ. ವಿಪರೀತ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮುಂದಿನ ವಾರವೇ ಮಳೆಯ ಸೂಚನೆ ನೀಡಿದೆ ಹವಾಮಾನ ವರದಿಗಳು.
ಸತತ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಇದು ನಿಜಕ್ಕೂ ಖುಷಿಪಡುವ ವಿಚಾರವೇ. ಮಾರ್ಚ್ 11, 12 ರಂದು ರಾಜ್ಯದ ಹಲವೆಡೆ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಬೆಂಗಳೂರು ನಗರಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎನ್ನುತ್ತಿವೆ ವರದಿಗಳು.
ಮಾರ್ಚ್, ಏಪ್ರಿಲ್ ನಲ್ಲಿ ಮುಂಗಾರುಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಈಗಾಗಲೇ ಹವಾಮಾನ ವರದಿಗಳು ಹೇಳಿತ್ತು. ಮೇಲೆ ಹೇಳಿದ ಜಿಲ್ಲೆಗಳಲ್ಲದೆ ಉಳಿದ ಭಾಗಗಳಲ್ಲಿ ಯಥಾವತ್ತು ಬಿಸಿಲಿನ ವಾತಾವರಣ ಮುಂದುವರಿಯಲಿದೆ.