ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹಲವು ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕಿದೆ ಎಂಬ ಆರೋಪಗಳ ಮಧ್ಯೆಯೇ ವಿಕಲಚೇತನರ ಅನುದಾನವನ್ನೂ ಕಡಿತ ಮಾಡಿರುವ ಆರೋಪ ಕೇಳಿಬಂದಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದನ್ನು ಪೂರೈಸಲು ಹಣಕಾಸಿನ ಬವಣೆ ಎದುರಿಸುತ್ತಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆಯೂ ಇಲ್ಲ, ಮುಂದುವರಿಸಬೇಕಾದರೆ ಇತರೆ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕುವುದು ಅನಿವಾರ್ಯ ಎಂಬ ಪರಿಸ್ಥಿತಿಯಾಗಿದೆ.
ಇದೀಗ ವಿಕಲಾಂಗರಿಗೆ ನೀಡಲಾಗುವ ಅನುದಾನದಲ್ಲಿ ಶೇ.80 ರಷ್ಟು ಕಡಿತ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಕಲಚೇತನ ಫೆಡರೇಷನ್ ಆಕ್ರೋಶ ಹೊರಹಾಕಿದೆ. ನಮ್ಮ ಯೋಜನೆಗಳಿಗೆ ನೀಡಬೇಕಾಗಿರುವ ಅನುದಾನದಲ್ಲಿ ಶೇ.80 ರಷ್ಟು ಕಡಿತ ಮಾಡಲಾಗಿದೆ. ಯಾವುದೇ ಯೋಜನೆಗಳು ಸುಗಮವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದೆ.
ಈಗಾಗಲೇ ಸರ್ಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸದೇ ಇದ್ದರೆ ಡಿಸೆಂಬರ್ ನಿಂದ ಪ್ರತಿಭಟನೆ ನಡೆಸಲು ಫೆಡರೇಷನ್ ತೀರ್ಮಾನಿಸಿದೆ. ವಿಕಲಚೇತನರಿಗೆ ನೀಡಲಾಗುವ ಹೊಲಿಗೆ ಯಂತ್ರ, ಬ್ರೈಲ್ ಕಿಟ್, ಬ್ಯಾಟರಿ ಆಪರೇಟೆಡ್ ವೀಲ್ ಚೇರ್, ಯಂತ್ರ ಚಾಲಿತ ದ್ವಿಚಕ್ರವಾಹನ ಸೇರಿದಂತೆ ಹಲವು ಸೌಲಭ್ಯಗಳಿಗೆ ನೀಡಲಾಗುವ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.