Select Your Language

Notifications

webdunia
webdunia
webdunia
webdunia

ದಿನೇಶ್ ಗುಂಡೂರಾವ್ ಗೆ ಆರೋಗ್ಯ ಸಚಿವರಾಗಲು ಏನು ಯೋಗ್ಯತೆ, ಎಂಬಿಬಿಎಸ್ ಓದಿದ್ದಾರಾ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಶುಕ್ರವಾರ, 29 ನವೆಂಬರ್ 2024 (15:53 IST)
ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಗ್ಗೆ ಇಂದು ವಿಧಾನಪರಿಷತ್ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಲು ಯೋಗ್ಯರೇ? ಅವರೇನು ವೈದ್ಯರೇ? ಎಂಬಿಬಿಎಸ್ ಓದಿದವರೇ? ಪಿಎಚ್‍ಡಿ ಆಗಿದೆಯೇ? ಎಂದು ಕೇಳಿದರು. ದನಕರುಗಳಿಗೆ ಕೊಡುವ ಔಷಧಿಗಳು ಆಸ್ಪತ್ರೆಗೆ ಸರಬರಾಜಾದ ಬಗ್ಗೆ ಸದನದಲ್ಲಿ ಕೇಳಿದ್ದೆವು. ಅದು ಮುದ್ರಣದ ತಪ್ಪು ಎಂದಿದ್ದರು. ಬಳಿಕ ವರದಿ ಬಂದಾಗ ಅದಾಗಿದ್ದು ನಿಜ; ವಿಷಯ ತಿಳಿದು ವಾಪಸ್ ಕಳಿಸಿದ್ದಾಗಿ ಹೇಳಿದ್ದರು ಎಂದಿದ್ದಾರೆ.

ಯಾದಗಿರಿಯಲ್ಲಿ ವೆಟರ್ನರಿ ಔಷಧಿ ಆಸ್ಪತ್ರೆಗೆ ಸರಬರಾಜಾಗಿದೆ. ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಆಗಿದ್ದುದಲ್ಲದೇ, ಕೊಟ್ಟ ದ್ರಾವಣಗಳು ಕಳಪೆ ಎಂದು ವರದಿ ಬರುತ್ತಿದೆ. ಹೀಗಿದ್ದರೂ ಅವರನ್ನು ಬದಲಿಸಿಲ್ಲ; ಇದು ಜೀವಗಳ ಜೊತೆ ಆಟ. ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು.

ಒಂದು ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ಗೌರವಾನ್ವಿತ ರಾಜ್ಯಪಾಲರಿಗೆ ಕೊಕ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸರ್ವಾಧಿಕಾರಿ ಧೋರಣೆ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ನಿಮ್ಮ ಮೇಲೆ ಭ್ರಷ್ಟಾಚಾರದ ಹಲವಾರು ಆರೋಪಗಳಿವೆ. ಕುಲಾಧಿಪತಿ ಸ್ಥಾನಕ್ಕೆ ಗವರ್ನರ್ ಯೋಗ್ಯರೆಂದು ಸಾಂವಿಧಾನಿಕ ಹುದ್ದೆಯಾಗಿ ಕೊಡಲಾಗಿತ್ತು. ಈಗ ಅದನ್ನು ವಾಪಸ್ ಪಡೆಯುವ ಮೂಲಕ ಕುಲಾಧಿಪತಿ ಆಗಲು ಹೊರಟಿದ್ದೀರಿ. ಭ್ರಷ್ಟಾಚಾರದಿಂದ ನಿಮ್ಮ ಸರಕಾರ ಕುಲಗೆಟ್ಟಿದ್ದು, ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಯೋಗ್ಯರೇ ಎಂದು ಕೇಳಿದರು.

ಸಂವಿಧಾನವನ್ನೇ ಸರ್ವನಾಶ ಮಾಡಿದ್ದರು..
ಸಂವಿಧಾನ ತೆಗೆಯುತ್ತಾರೆಂದು ಮುಖ್ಯಮಂತ್ರಿ, ಪಡ್ಡೆ ಹುಡುಗ ಪ್ರಿಯಾಂಕ್ ಖರ್ಗೆ ಸೇರಿ ಕಾಂಗ್ರೆಸ್ಸಿಗರು ಹೇಳುತ್ತಾರೆ. ನಮ್ಮಿಂದ ಸಂವಿಧಾನದ ವಿರುದ್ಧ ಪ್ರಯತ್ನ ಆಗಿತ್ತೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.
ನಿಮ್ಮ ಕಾಲದಲ್ಲಿ ಆಗಿದೆ. 1975-76ರಲ್ಲಿ 2 ವರ್ಷ ಸಂವಿಧಾನವನ್ನು ಅಮಾನತಿನಲ್ಲಿ ಇಡಲಾಗಿತ್ತು. ಕುರ್ಚಿ ಉಳಿಸಿಕೊಳ್ಳಲು ಇಂದಿರಾ ಗಾಂಧಿಯವರು ಕಾಂಗ್ರೆಸ್ಸೇ ದೇಶವೆಂದು ತಿಳಿದುಕೊಂಡು ಸಂವಿಧಾನವನ್ನೇ ಸರ್ವನಾಶ ಮಾಡಿದ್ದರು ಎಂದು ಟೀಕಿಸಿದರು.

ಜಮೀರ್ ಅಹ್ಮದ್ ಆಡಿದ್ದೇ ಮಾತು; ಅವರ ಮೇಲೆ ಯಾಕೆ ಕೇಸು ಹಾಕಿಲ್ಲ ಎಂದು ಕೇಳಿದರು. ತುಮಕೂರಿನ ಶಕುಂತಲಾ ನಟರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುದಕ್ಕೆ 7 ದಿನಗಳ ನೋಟಿಸ್ ಕೊಟ್ಟು ರಾತ್ರೋರಾತ್ರಿ ಬಂಧಿಸಿ ಕರೆತಂದಿದ್ದರು. ಹಾಗಿದ್ದರೆ 7 ದಿನ ಅವಕಾಶ ಕೊಟ್ಟಿದ್ದೇಕೆ? ಅವರನ್ನು ರೌಡಿಶೀಟರ್ ಮಾಡಬಾರದೇಕೆ ಎಂದು ಕೇಳಿದ್ದಾಗಿ ವಿವರಿಸಿದರು. ನಿಮ್ಮ ಸುತ್ತಲಿರುವ ಸಚಿವರು ರೌಡಿಗಳಿಗಿಂತ ಹೆಚ್ಚಾಗಿ ಮಾತನಾಡುತ್ತಾರೆ. ಅವರ ಮೇಲೂ ರೌಡಿಶೀಟರ್ ಹಾಕಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಆ ಹೆಣ್ಮಗಳ ಮೇಲಿನ ಕೇಸು ವಾಪಸ್ ಪಡೆಯಲು ಆಗ್ರಹಿಸಿದರು.

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರ ಮಿತಿ ಮೀರಿದ್ದನ್ನು ತಾವೆಲ್ಲರೂ ಗಮನಿಸಿದ್ದೀರಿ. ಕೇಂದ್ರದಲ್ಲಿರುವ ಮೋದಿಜೀ ಅವರ ಸರಕಾರವು ಈಗಾಗಲೇ ಆ ರೀತಿ ಹಿಂದುಗಳಿಗೆ ಹಿಂಸೆ ಮಾಡಬಾರದು ಮತ್ತು ಬಂಧಿತ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದೆ. ಇಸ್ಕಾನ್ ನಿಷೇಧ ಪ್ರಸ್ತಾಪವನ್ನು ಬಾಂಗ್ಲಾದ ಕೋರ್ಟ್ ತಿರಸ್ಕರಿಸಿದೆ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಈ ವಿಷಯದಲ್ಲಿ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಸರಕಾರದ ನಿಲುವನ್ನು ಸ್ಪಷ್ಟಪಡಿಸಲು ಅವರು ಒತ್ತಾಯಿಸಿದರು. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸದೆ ಇರುವ ಇಲ್ಲಿನ ಸರಕಾರ ಹಿಂದೂ ವಿರೋಧಿ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ತಕ್ಷಣವೇ ಹೇಳಿಕೆ ಕೊಟ್ಟು ಕೇಂದ್ರದ ನಿಲುವನ್ನು ಬೆಂಬಲಿಸಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ಯಾಕೆ ತಟಸ್ಥವಾಗಿದ್ದೀರಿ ಎಂದ ಅವರು, ಕಾಂಗ್ರೆಸ್ಸಿಗರ ತುಷ್ಟೀಕರಣದ ನಡೆಯಿಂದ ರಾಜ್ಯದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನದ ಕವಲುಗಳು ಒಡೆಯುತ್ತಿರುವುದನ್ನು ಗಮನಿಸಿದ್ದೇವೆ ಎಂದು ಟೀಕಿಸಿದರು. ಇಂಥ ಘಟನೆಯ ಪ್ರಚೋದನೆ ಉಂಟಾಗದಂತೆ ಕೇಂದ್ರ ಸರಕಾರ ಕಾರ್ಯೋನ್ಮುಖವಾಗಬೇಕು ಮತ್ತು ರಾಜ್ಯಗಳು ಇದಕ್ಕೆ ಮಮತಾ ಬ್ಯಾನರ್ಜಿಯವರ ಮಾದರಿಯಲ್ಲಿ ಬೆಂಬಲ ಕೊಡಬೇಕೆಂದು ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ರಸ್ತೆಯಲ್ಲಿ ಸಿಕ್ಕ ಸಿಎಂ ಸಿದ್ದರಾಮಯ್ಯ, ಕನ್ನಡಿಗ ದಂಪತಿಗಳು ಮಾಡಿದ್ದೇನು