Publish Date: Fri, 06 Feb 2026 (10:58 IST)
Updated Date: Fri, 06 Feb 2026 (11:02 IST)
ಬೆಂಗಳೂರು: ರಾಜ್ಯದಲ್ಲಿ ಒಮ್ಮೆ ತಣ್ಣಗಾಗಿದ್ದ ಕುರ್ಚಿ ಕದನ ಮತ್ತೆ ಭುಗಿಲೇಳುವ ಲಕ್ಷಣ ಕಂಡುಬರುತ್ತಿದೆ. ಕಾಂಗ್ರೆಸ್ ಶಾಸಕರು ಈ ಬಗ್ಗೆ ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ಕುಸ್ತಿ ಕದನ ತಾರಕಕ್ಕೇರಿತ್ತು. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣ ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು. ಆದರೆ ಹೈಕಮಾಂಡ್ ಕೆಲವು ದಿನ ಕಾಯಲು ಸೂಚನೆ ನೀಡಿತ್ತು.
ಹೀಗಾಗಿ ಕೆಲವು ದಿನಗಳಿಂದ ಈ ವಿಚಾರ ತಣ್ಣಗಾಗಿತ್ತು. ಆದರೆ ಸಂಕ್ರಾಂತಿ ಮುಗಿದು ಒಂದು ತಿಂಗಳು ಕಳೆದರೂ ಇನ್ನೂ ಹೈಕಮಾಂಡ್ ಈ ಬಗ್ಗೆ ಮೌನವಹಿಸಿರುವುದು ಕೆಲವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಡಿಕೆಶಿ ಬೆಂಬಲಿಗ ಕೆಲವು ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ನೇರವಾಗಿ ಭೇಟಿ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಶೀಘ್ರವೇ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಈ ಶಾಸಕರ ಬೇಡಿಕೆಯಾಗಿದೆ. ಆದರೆ ಸದ್ಯಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ರಣತಂತ್ರ ಹೆಣೆಯುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಬ್ಯುಸಿಯಾಗಿದೆ. ಹೀಗಾಗಿ ರಾಜ್ಯದ ನಾಯಕತ್ವ ವಿವಾದ ಮೈಮೇಲೆಳೆದುಕೊಳ್ಳುವ ಸಾಧ್ಯತೆ ಕಡಿಮೆ.