ಬೆಂಗಳೂರು: ರಾಜ್ಯದ ಭಂಡ ಸರಕಾರ, ಭಂಡ ಮುಖ್ಯಮಂತ್ರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡದೇ ಬೇರೆ ದಾರಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಹೋರಾಟ ನಿನ್ನೆಯಿಂದ ಆರಂಭವಾಗಿದೆ. ಇವತ್ತು ಮುಕ್ತಾಯವಾಗಿಲ್ಲ; ಇದು ಪ್ರಾರಂಭ ಅಷ್ಟೇ ಎಂದು ತಿಳಿಸಿದರು. ನಾಡಿನ ಜನರ ಪರವಾಗಿ ವಿಪಕ್ಷವಾದ ನಾವು ಹೋರಾಟ ಮಾಡುವುದು ಅನಿವಾರ್ಯ ಎಂದು ನುಡಿದರು.
ಮೊದಲೇ ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಡೀಸೆಲ್‍ಗೆ ಮೊನ್ನೆ ರಾತ್ರಿ 2 ರೂ. ಹೆಚ್ಚಿಸಿದ ದುಷ್ಟರಿವರು ಎಂದು ಖಂಡಿಸಿದರು. ಇದು ಅಧಿಕಾರದ ಮದ ಎಂದು ಟೀಕಿಸಿದರು. ಅಹೋರಾತ್ರಿ ಧರಣಿಯು ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಉತ್ಸಾಹ ತಂದು ಕೊಟ್ಟಿದೆ. ರೈತ ನಾಯಕ, ಹೋರಾಟಗಾರ ಯಡಿಯೂರಪ್ಪ ಅವರು ಸಹ ಹೋರಾಟದ ನೇತೃತ್ವ ವಹಿಸಿ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಪಟ್ಟಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು, ತಾಯಂದಿರೂ ಪಾಲ್ಗೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಮೂಲಕ ಇಡೀ ರಾಜ್ಯಕ್ಕೆ ನಮ್ಮ ಹೋರಾಟಕ್ಕೆ ಕಿಚ್ಚು ಹಚ್ಚಿದಂತಾಗಿದೆ. ಒಂದು ಪ್ರೇರಣೆ, ಶಕ್ತಿ ಲಭಿಸಿದೆ. 5ರಂದು ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ಇದೆ. ಏ. 7ರಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ನಮ್ಮ ಹೋರಾಟ ಮುಂದಕ್ಕೆ ಸಾಗುತ್ತದೆ ಎಂದರು.
ಯತ್ನಾಳ್ ಅವರು ಹಿರಿಯರಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ; ಅವರು ಸ್ವತಂತ್ರರಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.