Select Your Language

Notifications

webdunia
webdunia
webdunia
webdunia

ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕುಣಿದು ಕುಪ್ಪಳಿಸಿದ ರಾಜ್ಯ ನಾಯಕರು

Karnataka BJP

Krishnaveni K

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (16:13 IST)
ಬೆಂಗಳೂರು: ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸರಕಾರ ಸತತವಾಗಿ 3ನೇ ಬಾರಿಗೆ ಅಧಿಕಾರ ಪಡೆಯುತ್ತಿದೆ. ಅಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸಂತಸ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಪಿತೂರಿ ನಡೆಸಿತು. ಕಾಂಗ್ರೆಸ್ ಪಕ್ಷ ಏನೇ ತಿಪ್ಪರಲಾಗ ಹಾಕಿದರೂ ಸಹ ಕಾಂಗ್ರೆಸ್ ಗ್ಯಾರಂಟಿಗಿಂತ ನರೇಂದ್ರ ಮೋದಿಜೀ ಅವರ ಅಭಿವೃದ್ಧಿಯ ಗ್ಯಾರಂಟಿ ಬಗ್ಗೆ ಹರಿಯಾಣದ ಜನರು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ನಮ್ಮೆಲ್ಲರಿಗೆ ಸಂತೋಷವನ್ನು ತಂದು ಕೊಟ್ಟಿದೆ. ಪ್ರಜ್ಞಾವಂತ ಜನರು ಮೋದಿಜೀ ಅವರ ನಾಯಕತ್ವಕ್ಕೆ ಇನ್ನಷ್ಟು ಹೆಚ್ಚು ಪುಷ್ಟಿ ಕೊಟ್ಟಿದ್ದಾರೆ. ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಹರಿಯಾಣದ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ರಾಜ್ಯದ ಚುನಾವಣೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲಿ ಕೂಡ ಬಿಜೆಪಿ ಮೈತ್ರಿಕೂಟವು ಜಯಭೇರಿ ಬಾರಿಸಲಿದೆ ಎಂದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಬಳಸಿ, ಇದೀಗ ಗ್ಯಾರಂಟಿಗಳನ್ನು ಕಸದ ಬುಟ್ಟಿಗೆ ಹಾಕಿದ್ದು ಸೇರಿದಂತೆ ಅನೇಕ ವಿಚಾರಗಳು ಹರಿಯಾಣ ಚುನಾವಣೆಯಲ್ಲಿ ಪ್ರಸ್ತಾಪಕ್ಕೆ ಬಂದಿವೆ. ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರವು ಇವತ್ತು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ಮೂಲಕ ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ವಿಚಾರವನ್ನೂ ಬಿಜೆಪಿ ಅಲ್ಲಿ ಪ್ರಚಾರ ಮಾಡಿತ್ತು. ಕಾಂಗ್ರೆಸ್ಸಿನ ಡೋಂಗಿ ರಾಜಕಾರಣ, ಕಾಂಗ್ರೆಸ್ಸಿನವರು ಹೇಳುವುದೊಂದು, ಮಾಡುವುದೊಂದು- ಇವೆಲ್ಲವೂ ಅಲ್ಲಿನ ಚುನಾವಣೆ ವೇಳೆ ಚರ್ಚೆ ಆಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಬೆಂಗಾವಲು ವಾಹನಕ್ಕೆ ಅಡ್ಡ, ಜನಾರ್ದನ ರೆಡ್ಡಿ ಕಾರು ವಶಕ್ಕೆ