ಬೆಂಗಳೂರು (ಅ 13) : ಆಡಳಿತ ಪಕ್ಷ ಬಿಜೆಪಿ ಕಮಿಷನ್ ರಾಜಕಾರಣ ಮಾಡುತ್ತಿದೆ, ಕೊರೋನಾ ಕಾಲದಲ್ಲೂ ಭ್ರಷ್ಟಾಚಾರ ಎಗಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಆರೋಪಿಸುತ್ತಿದೆ.
ಈ ಬಗ್ಗೆ ಹೋರಾಟವನ್ನೂ ರೂಪಿಸಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಪಕ್ಷದ ಪತ್ರಿಕಾಗೋಷ್ಠಿಯಲ್ಲೇ ಲೀಕ್ ಆದ ಒಂದು ಆಡಿಯೋ ಇದೀಗ ಸ್ವತಃ ಕಾಂಗ್ರೆಸ್ ಪಕ್ಷವನ್ನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೇ ಮುಜುಗುರಕ್ಕೆ ಈಡುಮಾಡಿದೆ. ಡಿ.ಕೆ. ಶಿವಕುಮಾರ್ ಕಮಿಷನ್ ರಾಜಕಾರಣ ನಡೆಸುತ್ತಿದ್ದಾರ? ಅವರ ಎಲ್ಲಾ ಬೆಂಬಲಿಗರೂ ಕೋಟಿ ಕೋಟಿ ಲೂಟಿ ಮಾಡಿದ ಭ್ರಷ್ಟರಾ? ಎಂಬ ಚರ್ಚೆಗಳು ಇದೀಗ ರಾಜ್ಯ ರಾಜಕಾರಣದಲ್ಲಿ ಹರಿದಾಡುದಾಡುತ್ತಿದೆ. ಅಲ್ಲದೆ, ಈ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವಿಟರ್ ವಾರ್ ಅರ್ಥಾತ್ ಕೆಸರೆರಚಾಟಕ್ಕೂ ಕಾರಣವಾಗಿದೆ.
ಏನಿದು ಘಟನೆ?
ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ಹಿರಿಯ ನಾಯಕ ಉಗ್ರಪ್ಪ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಅವರ ಪಕ್ಕ ಕುಳಿತಿದ್ದ ಕಾಂಗ್ರೆಸ್ ಮಾಧ್ಯಮ ಸಂಯೋಜನ ಸಲೀಂ ಉಗ್ರಪ್ಪ ಅವರ ಕಿವಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಅಲ್ಲದೆ, "ಈ ಭ್ರಷ್ಟಾಚಾರದಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ನೂರಾರು ಕೋಟಿ ಹಣ ಲೂಟಿ ಮಾಡಿದ್ದು, ಸ್ವತಃ ಡಿಕೆಶಿ ಅವರಿಗೆ 8 ರಿಂದ 12 ಪರ್ಸೆಂಟ್ ಕಮಿಷನ್ ಹೋಗುತ್ತದೆ" ಎಂದಿದ್ದರು. ಆದರೆ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಆಫ್ ಆಗಿರದ ಕಾರಣ ಈ ಖಾಸಗಿ ಸಂಭಾಷಣೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.