Publish Date: Mon, 11 Oct 2021 (14:30 IST)
Updated Date: Mon, 11 Oct 2021 (13:52 IST)
ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನನಗೆ ಪ್ರೀತಿಯೂ ಇಲ್ಲ ದ್ವೇಷವೂ ಇಲ್ಲ. ನಾನು ರಾಷ್ಟ್ರ ರಾಜಕಾರಣಕ್ಕೆ ತೆರಳುವ ಬಗ್ಗೆ ನನ್ನ, ಸೋನಿಯಾ ಗಾಂಧಿಯ ನಡುವೆ ಆ ಚರ್ಚೆ ಆಗಿಲ್ಲ. ಜತೆಗೆ ನನಗೆ ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ಆಸಕ್ತಿಯೂ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ನಗರ ಉಸ್ತುವಾರಿಗಾಗಿ ಕಿತ್ತಾಟ ಶುರುವಾಗಿದೆ.ಇವರಿಗೆ ಬೇರೆ ಲಾಭ ಇದೆ ಹೀಗಾಗಿ ಪೈಪೋಟಿ ಬೀಳುತ್ತಾರೆ. ರಸ್ತೆಗುಂಡಿಗೆ ಬಿದ್ದು ಅಹಿತಕರ ಘಟನೆಗಳು ನಡೆಯುತ್ತಿವೆ. ಆ ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ಆದರೆ ತಾವು ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದರು. ಆದರೆ, ಸಿದ್ದರಾಮಯ್ಯ ಮಾತ್ರ ರಾಜ್ಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸ್ಪಷ್ಟನೆ ನೀಡಿದ್ದು ಕುತೂಹಲ ಮೂಡಿಸಿತ್ತು. ಇದೀಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿರುವ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬುದು ನಮ್ಮ ಪಕ್ಷದ ಎಲ್ಲರ ಆಸೆ ಎಂದಿದ್ದಾರೆ. ಹಾಗೇ, ಕರ್ನಾಟಕದಲ್ಲಿ ಬಿಜೆಪಿಯ ವಾಸ್ತವ ಸ್ಥಿತಿ, ಜೆಡಿಎಸ್ ಕುಟುಂಬ ರಾಜಕಾರಣ, ಡಿಕೆ ಶಿವಕುಮಾರ್ ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ.
2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವ ಸಿದ್ದರಾಮಯ್ಯ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಡೆ ಗಾರ್ಡಿಯನ್ಗೆ ಸಂದರ್ಶನ ನೀಡಿರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ, ಕರ್ನಾಟಕದ ರಾಜಕಾರಣ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.