ಬೆಂಗಳೂರು: ರಾಜ್ಯದ 15 ಜೀವನದಿ ಹಾಗೂ ಉಪ ನದಿಗಳಿಂದ ಸಂಗ್ರಹ ಮಾಡಿದ ಪವಿತ್ರ ಗಂಗಾ ಜಲದ ಕಳಸ ಪ್ರತಿಷ್ಠಾಪನೆಯ ಮಹಾಪೂಜಾ ಕಾರ್ಯಕ್ರಮ ಹಾಗೂ ಕಳಸ ಪ್ರತಿಷ್ಠಾಪನೆ ನಾಳೆ (ಗುರುವಾರ) ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಇರಿಸಿರುವ ಬೃಹತ್ ಬ್ರಹ್ಮ ಕಳಸಕ್ಕೆ ಹಿರಿಯ ಪುರೋಹಿತರಿಂದ ಪೂಜಾ ಕೈಂಕರ್ಯ ನಡೆಯಲಿದೆ.
10 ಅಡಿಯ ಎತ್ತರದ 500 ಲೀಟರ್ ಜಲ ತುಂಬಲಿರುವ ಕಳಸವನ್ನು ಸ್ಥಾಪನೆ ಮಾಡಲಾಗುವುದು. ಕಳಸದ ಸುತ್ತಾ ತೂಗು ದೀಪಾ ಅಲಂಕಾರ ಮಾಡಲಾಗಿದೆ. ಜತೆಗೆ ದೇಶದ ಏಳು ಮಹಾ ನದಿಗಳ ಹೆಸರಿನಲ್ಲಿ ಪುಟ್ಟ ಕಳಸಗಳನ್ನು ಇಟ್ಟು ಪೂಜೆ ನೆರವೇರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಗಂಗಾ ಪೂಜೆ, ಪರ್ಜನ್ಯ ಹೋಮ:
ಬೆಳಗ್ಗೆ 9 ಗಂಟೆಯಿಂದ ಗಂಗಾ ಪೂಜೆ ಸಂದರ್ಭದಲ್ಲಿ ಪರ್ಜನ್ಯ ಹೋಮ, ಗಣ ಹೋಮ, ನವಗ್ರಹ ಹೋಮ ಸೇರಿದಂತೆ ಹಲವು ಪೂಜೆ ಕಾರ್ಯಕ್ರಮವನ್ನು ಪುರೋಹಿತರು ನೆರವೇರಿಸಲಿದ್ದಾರೆ. ಈ ಕಳಸಕ್ಕೆ ಮುಂದಿನ ಚುನಾವಣೆವರೆಗೆ ಹಿಂದೂ ಸಂಪ್ರದಾಯದಂತೆ ನಿತ್ಯ ಗಂಗಾಪೂಜೆ ನಡೆಯುತ್ತದೆ. ಹಾಗಾಗಿ, ನಾಳೆ ಕಳಸ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತದೆ.
ನಾಳೆಯಿಂದ ಮುಂಬರುವ ವಿಧಾನಸಭೆ ಚುನಾವಣೆವರೆಗೂ ಈ ಗಂಗಾ ಮಾತೆಯ ಕಳಸಕ್ಕೆ ನಿತ್ಯಪೂಜೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪೂಜೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ನಾಯಕರಾದ ಹೆಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಶಾಸಕರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ಪರಂಪರೆಯ ಮಂಟಪ:
ಕಳಸ ಪ್ರತಿಷ್ಠಾಪನೆ ಮಾಡಲಿರುವ ಮಂಟಪವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ವಾಸ್ತುಶಿಲ್ಪ ಉಳ್ಳ ಮಂಟಪ ವಿಶೇಷ ಆಕರ್ಷಣೆಯಾಗಿದೆ. ಇಡೀ ಮಂಟಪವನ್ನು ಆವರಣ ಮಂಟಪ ಕಲಾ ಆರ್ಟ್ ನ ಕಲಾವಿದರು ಸಿದ್ಧಪಡಿಸಿದ್ದಾರೆ.
ಈ ಮಂಟಪದಲ್ಲಿ ನಿರಂತರವಾಗಿ ಜಪ, ಮಂತ್ರ, ಮಂಗಳ ನಾದ ಮೊಳಗುತ್ತಿರುತ್ತದೆ.