ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಧಿಸಲಾಗಿದ್ದಂತಹ ನೈಟ್ ಕರ್ಫ್ಯೂ ಅನ್ನು ಹಿಂಪಡೆಯಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕೋವಿಡ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಜ್ಞರು ನೀಡಿದಂತ ವರದಿಯ ಆಧಾರದ ಮೇಲೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರೋ ಕಾರಣದಿಂದಾಗಿ ಜನವರಿ 31ರಿಂದ ರಾಜ್ಯಾಧ್ಯಂತ ನೈಟ್ ಕರ್ಪ್ಯೂ ಅನ್ನು ರದ್ದು ಪಡಿಸಲಾಗಿದೆ ಎಂಬುದಾಗಿ ತಿಳಿಸಿದರು.
ಇನ್ನೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಮದುವೆಗೆ ಅವಕಾಶ, ಓಪನ್ ಸ್ಥಳದಲ್ಲಿ 300 ಜನರಿಗೆ ಅವಕಾಶ ನೀಡಲಾಗಿದೆ. ಕಚೇರಿ ಕೆಲಸದ ಶೇ.50ರಷ್ಟು ಮಿತಿಯನ್ನು ವಾಪಾಸ್ ಪಡೆಯಲಾಗಿದೆ. ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರಿಸ ಲಾಗಿದ್ದು, ಜಾತ್ರೆ, ಧರಣಿ, ಪ್ರತಿಭಟನೆ ಸೇರಿದಂತೆ ಹೆಚ್ಚು ಜನರು ಸೇರುವಂತ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಸ್ಪೋರ್ಟ್ಸ್ ಸ್ಟೇಡಿಯಂಗಳ ಮಿತಿ ಶೇ.50ರಷ್ಟು ಮುಂದುವರೆಸಲಾಗಿದೆ. ಇನ್ನೂ ಅಂತರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.