ಕರ್ನಾಟಕದ ಶಕ್ತಿಮಾತೆ ಎಂದೇ ಪ್ರಖ್ಯಾತಿ ಹೊಂದಿರುವ ದೇವಿಗೆ ಜಲದಿಗ್ಬಂಧನ ಆಗಿರೋದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಮೂರನೆಯ ಬಾರಿ ಮುಳುಗಡೆ ಆಗಿದೆ.
ಮಳೆರಾಯನ ಅಬ್ಬರದಿಂದಾಗಿ ಕೃಷ್ಣಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದ ಅಥಣಿ ತಾಲೂಕಿನ 21 ಗ್ರಾಮಗಳಲ್ಲಿ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಈ ನಡುವೆ ಮತ್ತೆ ವರುಣ ತನ್ನ ಅಬ್ಬರ ಮುಂದುವರೆಸಿದ್ದು, ಸದ್ಯ ಜನರಲ್ಲಿ ಆತಂಕ ಮನೆ ಮಾಡಿದೆ. ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಕಟಾವಿಗೆ ಬಂದ ಮೆಕ್ಕೆಜೋಳ ಮತ್ತು ದ್ವಿದಳ ಧಾನ್ಯಗಳು ಅಲ್ಲೆ ಮೊಳಕೆ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ದೇವಾನು ದೇವತೆಗಳಿಗೂ ಜಲಕಂಟಕ ಎದುರಾಗಿ ಭಕ್ತರು ಪರದಾಡುವಂತಾಗಿದೆ.
ಅಥಣಿ ತಾಲೂಕಿನ ಎಲ್ಲಮ್ಮವಾಡಿಯ ರೇಣುಕಾದೇವಿ ಎಲ್ಲಮ್ಮನ ಪವಾಡಗಳು ಜನ-ಜನಿತವಾಗಿರುವಾಗಲೇ ಕಳೆದ ಎರಡು ತಿಂಗಳ ಅವಧಿಯಲ್ಲಿ ದೇವಸ್ಥಾನ ಮೂರನೆಯ ಬಾರಿ ಮುಳುಗಡೆ ಆಗಿದೆ. ಮಹಾರಾಷ್ಟ್ರದ ಮೀರಜ್, ಸಾಂಗಲಿ, ಕೊಲ್ಹಾಪುರ, ಕನ್ಹೇರಿ ಸೇರಿದಂತೆ ಹಲವೆಡೆಯಿಂದ ಭಕ್ತಸಾಗರ ಹರಿದು ಬರುತ್ತಿದ್ದು, ಭಕ್ತರು ದೇವಿಯ ದರ್ಶನಕ್ಕೆ ಪರದಾಡುವಂತಾಗಿದೆ.