Publish Date: Tue, 14 Aug 2018 (10:57 IST)
Updated Date: Tue, 14 Aug 2018 (10:58 IST)
ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದ ಭುಗಿಲೆದ್ದಾಗ ನಾವು ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡುತ್ತೇವೆ ಎಂದಿದ್ದ ಸಿಎಂ ಕುಮಾರಸ್ವಾಮಿ ಈಗ ಉಲ್ಟಾ ಹೊಡೆದಿದ್ದಾರೆ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿರುವ ಕೆ-ಶಿಪ್ ಕಾರ್ಯಾಲಯವನ್ನು ಹಾಸನಕ್ಕೆ ವರ್ಗಾಯಿಸುತ್ತಿರುವ ಸಿಎಂ ಕುಮಾರಸ್ವಾಮಿಗೆ ನಡೆ ಬಗ್ಗೆ ಅವರು ಈ ರೀತಿ ಟೀಕೆ ಮಾಡಿದ್ದಾರೆ. ಕುಮಾರಸ್ವಾಮಿ ಸಹೋದರ, ಎಚ್ ಡಿ ರೇವಣ್ಣ ಚಿತಾವಣೆ ಮೇರೆಗೆ ಈ ಸ್ಥಳಾಂತರ ನಡೆಯುತ್ತಿದೆ ಎಂಬ ಆರೋಪವಿದೆ. ಈ ಬಗ್ಗೆ ಈಗಾಗಲೇ ಬೆಳಗಾವಿಯಲ್ಲಿ ಪ್ರತಿಭಟನೆ ಶುರುವಾಗಿದೆ.
ಈ ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ‘ಸಿಎಂ ಕುಮಾರಸ್ವಾಮಿ ಹೇಳಿದ್ದೊಂದು ಮಾಡುತ್ತಿರುವುದು ಇನ್ನೊಂದು. ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡುತ್ತೇವೆ ಎಂದು ಈಗ ಕೆ-ಶಿಪ್ ಕಾರ್ಯಾಲಯವನ್ನೇ ವರ್ಗಾಯಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಷ್ಟೇ ಅಲ್ಲದೆ, ದೇಶದಲ್ಲಿ ಅತೀ ಹೆಚ್ಚು ರಾಜ್ಯವನ್ನಾಳಿದ್ದು ಹಿಂದೆ ಕಾಂಗ್ರೆಸ್ ನವರು. ನಮ್ಮ ರಾಜ್ಯವನ್ನೂ ಹಾಳು ಮಾಡಿದ್ದು ಕಾಂಗ್ರೆಸ್ ನವರು. ಈಗ ಅಂತಹವರ ಜತೆ ಸೇರಿಕೊಂಡು ಜೆಡಿಎಸ್ ಸರ್ಕಾರ ನಡೆಸುತ್ತಿದೆ ಎಂದೂ ಅವರು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.