ಚಿಕ್ಕಮಗಳೂರು: ರಾಜ್ಯದಲ್ಲಿ ಯುದ್ಧದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ, ರಾಜ್ಯದ ಜನರು ಬೆಲೆ ಏರಿಕೆಯ ಬಿಸಿಯಿಂದ ಕಂಗೇಟ್ಟಿರುವಾಗ ಯಾವ ಸಾಧನೆಗೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ಬಾಣಂತಿಯರು ಮತ್ತು ಪ್ರಾಮಾಣಿಕ ಅಧಿಕಾರಿಗಳ ಸಮಾಧಿಗಳ ಮೇಲೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ ನಡೆಸಲು ಹೊರಟಿದೆ ಎಂದು ಕಿಡಿಕಾರಿದರು.
ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ. ಕಳೆದ ಎರಡು ವರ್ಷಗಳಲ್ಲಿ, ಸುಮಾರು 2,000 ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ, 'ಶೇಕಡಾ 60 ಕಮಿಷನ್ ಸರ್ಕಾರ' ಪ್ರಾಮಾಣಿಕ ಅಧಿಕಾರಿಗಳನ್ನು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ. ಮೂರನೇ ಬಾರಿಗೆ ಬಿಯರ್ ದರ ಹೆಚ್ಚಾಗಿದೆ. ಖಜಾನೆ ಖಾಲಿಯಾಗಿದ್ದು, ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಮದ್ಯದ ದರ ಹೆಚ್ಚಳ ಆಗಿರುವುದರಿಂದ ಕಳ್ಳತನ ಹೆಚ್ಚಾಗಲಿದೆ.
ಜನೌಷಧಿ ಯೋಜನೆಗೆ ಎಳ್ಳು ನೀರು ಹಾಕಿದೆ. ಎರಡು ವರ್ಷ ತುಂಬುತ್ತಿರುವ ಬೇಜವಬ್ದಾರಿ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
ಎರಡು ವರ್ಷಗಳ ಸರ್ಕಾರದ ಸಾಧನೆ ಏನು, ಯಾವುದಾದರೂ ಅಣೆಕಟ್ಟೆ ಕಟ್ಟಿದ್ದಾರಾ, ಕಟ್ಟಿರುವ ಅಣೆಕಟ್ಟೆಯ ಎತ್ತರ ಜಾಸ್ತಿ ಮಾಡಿದ್ದಾರಾ, ಗೇಟ್ ರಿಪೇರಿ ಸಾಧ್ಯವಾಗಿಲ್ಲ. ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ' ಎಂದು ಪ್ರಶ್ನಿಸಿದರು.