ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಮೊನ್ನೆ ಹಾವೇರಿಯಲ್ಲಿ ಸಿದ್ದರಾಮಯ್ಯನವರ ಎದುರೇ ಡಿಕೆ ಶಿವಕುಮಾರ್ ಕೊಟ್ಟ ಮಾತನ್ನು ನೆನಪಿಸಿದ್ದಾರೆ. ಇದನ್ನು ನೋಡಿದರೆ ಸಂಕ್ರಾಂತಿಗೆ ಕ್ರಾಂತಿಯಾಗುತ್ತಾ ಎಂಬ ಅನುಮಾನ ಮೂಡುತ್ತದೆ.
ಹೈಕಮಾಂಡ್ ನಾಯಕರ ವಿದೇಶ ಪ್ರವಾಸ, ಅಡೆತಡೆಗಳಿಂದಾಗಿ ಅಧಿಕಾರ ಹಂಚಿಕೆ ವಿಚಾರ ಕೊಂಚ ತಣ್ಣಗಾಗಿದೆ. ಆದರೆ ಹೊಸ ವರ್ಷದಲ್ಲಿ ಈ ಬಗ್ಗೆ ಮಾತನಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಹೀಗಾಗಿ ಸಂಕ್ರಾಂತಿ ವೇಳೆಗೆ ಸಿಹಿ ಸುದ್ದಿ ಸಿಗಬಹುದೇ ಎಂದು ಡಿಕೆಶಿ ಬೆಂಬಲಿಗರು ಎದಿರು ನೋಡುತ್ತಿದ್ದಾರೆ.
ಡಿಕೆ ಶಿವಕುಮಾರ್ ಮೊನ್ನೆ ಹಾವೇರಿ ಕಾರ್ಯಕ್ರಮದಲ್ಲಿ ಮತ್ತೆ ಮಾತಿನ ಶಕ್ತಿ ಬಗ್ಗೆ ಸಿದ್ದರಾಮಯ್ಯ ಎದುರೇ ಮಾತನಾಡಿದ್ದಾರೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮಾತು ಕೊಟ್ಟರೆ ಉಳಿಸಬೇಕು. ಅದೇ ಜಗತ್ತಿನ ದೊಡ್ಡ ಶಕ್ತಿ ಎಂದಿದ್ದರು. ಬಳಿಕ ಮೆತ್ತಗೆ ಈ ಮಾತು ಹೇಳಿದ್ದು ಕೇಂದ್ರ ಸರ್ಕಾರಕ್ಕೆ ಎಂದಿದ್ದಾರೆ.
ಆದರೆ ಡಿಕೆಶಿಯ ಈ ಹೇಳಿಕೆಗೆ ಸಿದ್ದರಾಮಯ್ಯರತ್ತ ಹೂಡಿದ ಬಾಣ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿದೇಶದಿಂದ ಬಂದ ಬಳಿಕ ಅಧಿಕಾರ ಹಂಚಿಕೆ ವಿಚಾರ ಮಾತನಾಡೋಣ ಎಂದು ಡಿಕೆಶಿಗೆ ಸೂಚನೆ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಈಗ ಕೊಟ್ಟ ಮಾತಿನ ಮಾತನಾಡುವ ಮೂಲಕ ಆ ವಿಚಾರವನ್ನು ಡಿಕೆಶಿ ನೆನಪಿಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಸದ್ಯಕ್ಕೆ ಸೋನಿಯಾ ಗಾಂಧಿ ಅನಾರೋಗ್ಯ ರಾಜ್ಯ ರಾಜಕೀಯ ಚರ್ಚೆಗೆ ಬ್ರೇಕ್ ಹಾಕಿದೆ. ಆದರೆ ಸಂಕ್ರಾಂತಿ ವೇಳೆಗೆ ಅವರು ಚೇತರಿಸಿಕೊಂಡು ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ ಗರಿಗೆದರಲಿದೆ ಎನ್ನಲಾಗುತ್ತಿದೆ.