ಮೈಸೂರು: ಇಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರಿಗೆ ಕಾಂಗ್ರೆಸ್ ಮುಖಂಡರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದ್ದು, ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಚುನಾಯಿತ ಪ್ರತಿನಿಧಿಯೊಬ್ಬರ ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಚಿವರು ಮತ್ತು ಕಾಂಗ್ರೆಸ್ ಮುಖಂಡನೂ ಘಟನೆಯನ್ನು ಅಲ್ಲಗಳೆದಿದ್ದಾರೆ.
ಸಚಿವರು ಕಾಂಗ್ರೆಸ್ ಮುಖಂಡನ ಎದುರಿಗೆ ಬಂದು ಹಗುರವಾದ ಧಾಟಿಯಲ್ಲಿ ಮಾತನಾಡಿದ್ದು, ಈ ವೇಳೆ ಕೆರಳಿದ ಕಾಂಗ್ರೆಸ್ ಮುಖಂಡ ಸಚಿವರಿಗೆ ಕಪಾಳ ಮೋಕ್ಷ ಮಾಡಿದರು ಎಂದು ತಿಳಿದುಬಂದಿದೆ. ಈ ಘಟನೆಗೆ ಹಲವು ಮಂದಿ ಸಾಕ್ಷಿಯಾಗಿದ್ದು, ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ
ಸಚಿವ ಹಾಗೂ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಮುಖಂಡ ಇಬ್ಬರೂ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಸ್ಥಳದಲ್ಲಿ ಹೆಚ್ಚು ಜನರಿದ್ದ ಕಾರಣ ಸಚಿವರ ಬೆಂಬಲಿಗರು ಗಲಾಟೆಯನ್ನು ಮಾಡದೆ ಸ್ಥಳದಿಂದ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಅವರಿಬ್ಬರೂ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಇಬ್ಬರ ನಡುವೆ ವರ್ಗಾವಣೆ ದಂಧೆ ಹಣ ಹಂಚಿಕೆ ವಿಚಾರದಲ್ಲಿ ಗಲಾಟೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಆರೋಪಿಸಿದ್ದಾರೆ.
ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ದಂಧೆ ವಿಚಾರವಾಗಿಯೇ ಮೈಸೂರಿನಲ್ಲಿ ಸಚಿವರು, ಮತ್ತಿತರರು ಹೊಡೆದಾಡಿಕೊಂಡಿದ್ದಾರೆಂಬ ಮಾಹಿತಿ ಇದೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆದಿದ್ದಾರೆ. ರಾಜ್ಯದ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಎಂದು ಲೇವಡಿ ಮಾಡಿದ್ದಾರೆ.