ಕಲಬುರಗಿ : ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸೇಫ್ ಕ್ಷೇತ್ರವಲ್ಲ. ಹೀಗಾಗಿ ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧೆ ಮಾಡಿದರೆ, ಹರಕೆಯ ಕುರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಅವರು ಜಿಲ್ಲೆಯ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕೋಲಾರದಲ್ಲಿ ನಿಲ್ಲಿಸುವ ಮೂಲಕ ಅವರ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದರು.
ನಾನು ಸ್ವತಃ ಕೋಲಾರದಲ್ಲಿ ಸುತ್ತಾಡಿ, ಅಲ್ಲಿಯ ಜನರ ಭಾವನೆ ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ ಇಲ್ಲ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದರು.
3ಆರ್ಡಿ ಮೀಸಲಾತಿ 2ಜ ಗೆ ಸೇರ್ಪಡೆಗೆ ಹೈಕೋರ್ಟ್ ತಡೆ ವಿಚಾರವಾಗಿ ಮಾತನಾಡಿದ ಅವರು, 3ಬಿಯನ್ನು 2ಡಿ ಗೆ ಘೋಷಣೆ ಮಾಡಿ ರಂಗ ಎನ್ನುವ ಹೆಸರು ಮಂಗ ಮಾಡಿದ್ದಾರೆ. ಇವರು ಮೂಗಿಗೆ ತುಪ್ಪ ಸವರಿಲ್ಲ. ಬದಲಾಗಿ, ಹಣೆ ಮೇಲೆ ಸುರಿದ ವಾಸನೆ ಸಹ ಬಾರದಂತೆ ಮಾಡಿದ್ದಾರೆ ಎಂದ ಅವರು, ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದರು.