Publish Date: Thu, 08 Oct 2026 (11:47 IST)
Updated Date: Thu, 08 Oct 2026 (11:51 IST)
ಬೆಂಗಳೂರು: 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಮತ್ತು ತಾವೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಡಿ.ಕೆ. ಶಿವಕುಮಾರ್ ಅವರು ಮತ್ತೆ ಮುಖ್ಯಮಂತ್ರಿಯಾಗುವುದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಸ್ಟಿಂಗ್ ಆಪರೇಷನ್, ಡಿಂಗ್ ಆಪರೇಷನ್‌ಗಳನ್ನು ಬದಿಗಿಟ್ಟು ಸರಿಯಾಗಿ ಆಡಳಿತ ನಡೆಸಲಿ” ಎಂದು ವ್ಯಂಗ್ಯವಾಡಿದರು.
ನೂರು ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಏನು ಕಡಿದು ಕಟ್ಟಿಹಾಕಿದ್ದಾರೆ?
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ನೂರು ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಏನು ಕಡಿದು ಕಟ್ಟಿಹಾಕಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ತಮ್ಮನ್ನು ಪ್ರಜಾಸೇವಕ ಎಂದು ಹೇಳಿಕೊಳ್ಳುತ್ತಾರೆ. ಆದರೆ ರಾಜ್ಯ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕೆಂಬ ಕನಿಷ್ಠ ಕಾಳಜಿಯೂ ಸರ್ಕಾರಕ್ಕೆ ಇಲ್ಲ. ರೈತರಿಗೆ ₹2,500 ಪರಿಹಾರ ನೀಡುವುದಾಗಿ ಹೇಳುವುದು ಬಡವರಿಗೆ ಭಿಕ್ಷೆ ನೀಡಿದಂತೆ ಎಂದು ಅವರು ಟೀಕಿಸಿದರು.
“ಡಿ.ಕೆ. ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ಬಗ್ಗೆ ಇರುವ ಕಾಳಜಿ ಜನರ ಬಗ್ಗೆ ಇಲ್ಲ. ರಿಯಲ್ ಎಸ್ಟೇಟ್ ವಿಚಾರದಲ್ಲಿ ಅವರು ಎಕ್ಸ್‌ಪರ್ಟ್. ಕಸದಿಂದ ರಸ ತೆಗೆಯುವಲ್ಲಿ ಅವರು ಬುದ್ಧಿವಂತರು” ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಸರ್ಕಾರದ ಬಹುತೇಕ ಯೋಜನೆಗಳು ಘೋಷಣೆ ಮತ್ತು ಪ್ರಚಾರಕ್ಕೆ ಸೀಮಿತವಾಗಿವೆ. ಮುಖ್ಯಮಂತ್ರಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಅವರಿಗೆ ಬರೆಯಲಾಗಿರುವ ಪತ್ರವೇ ಸರ್ಕಾರದ ಆರ್ಥಿಕ ನಿರ್ವಹಣೆಗೆ ಕೈಗನ್ನಡಿ ಎಂದು ಹೇಳಿದರು.
ರಿಂಗ್‌ರೋಡ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ: ಆರೋಪ
ಉತ್ತರ ಕರ್ನಾಟಕದ ನೀರಾವರಿ ಮತ್ತು ಅಭಿವೃದ್ಧಿ ಯೋಜನೆಗಳಾದ ಯುಕೆಪಿ ಮತ್ತಿತರ ಪ್ರಮುಖ ಯೋಜನೆಗಳಿಗೆ ಆದ್ಯತೆ ನೀಡುವ ಬದಲು ಎಲ್ಲ ತಾಲೂಕುಗಳಲ್ಲೂ ರಿಂಗ್‌ರೋಡ್ ಮಾಡುವ ಘೋಷಣೆ ಮಾಡಲಾಗುತ್ತಿದೆ. ವಿಶ್ವಬ್ಯಾಂಕ್‌ನಿಂದ ಸಾಲ ಪಡೆದು ರಿಂಗ್‌ರೋಡ್‌ಗಳನ್ನು ನಿರ್ಮಿಸುವ ಯೋಜನೆಯ ಹಿಂದೆ ರಿಯಲ್ ಎಸ್ಟೇಟ್ ಹಿತಾಸಕ್ತಿ ಇದೆ ಎಂದು ವಿಜಯೇಂದ್ರ ಆರೋಪಿಸಿದರು.
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲ. ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಜಾತಿ ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಟೀಕಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ವಹಿಸಿಕೊಂಡ ನಂತರ ದಲಿತರ ಮೇಲಿನ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ಜಾತಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪ್ರಯತ್ನ
ಹೇಗಾದರೂ ಮಾಡಿ ಬಣ್ಣಬಣ್ಣದ ಮಾತುಗಳನ್ನಾಡಿ, ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯಬೇಕೆಂಬ ಪ್ರಯತ್ನ ಕಾಂಗ್ರೆಸ್‌ನಿಂದ ನಡೆಯುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಹೇಳಿದ ಅವರು, ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಬೂತ್ ಸಂಕಲ್ಪ ಯಾತ್ರೆ ಮೂಲಕ ಸಂಘಟನೆಯನ್ನು ಬಲಪಡಿಸುತ್ತಿದೆ ಎಂದರು.
ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವರು ಎಚ್ಚರವಾಗಿರಿ ಎಂದಿರುವ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು
ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸ್ಟಿಂಗ್ ಆಪರೇಷನ್ ಯಾರು ಮಾಡಿದ್ದರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
“ತಮ್ಮದೇ ಶಾಸಕರ ಮೇಲೆ ಸ್ಟಿಂಗ್ ಮಾಡಿಸುತ್ತಾರೆಯೇ? ಡಿಂಗ್ ಆಪರೇಷನ್ ಯಾರು ಮಾಡಿದ್ದಾರೆ ಎಂಬುದೂ ಜನರಿಗೆ ಗೊತ್ತಿದೆ” ಎಂದು ವ್ಯಂಗ್ಯವಾಡಿದರು.
ಎಸ್‌ಐಆರ್ ಪ್ರತಿಭಟನೆ: ಎಲ್ಲರನ್ನೂ ಸೇರಿಸಿಕೊಂಡು ಪ್ರತಿಭಟನೆ
ಎಸ್‌ಐಆರ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ವಿವಿಧ ಪಕ್ಷಗಳು ಮತ್ತು ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವುದನ್ನು ಟೀಕಿಸಿದ ವಿಜಯೇಂದ್ರ, ತಮ್ಮೊಬ್ಬರ ಕೈಯಲ್ಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿರುವುದರಿಂದ ಎಲ್ಲರನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿಗೆ ₹6,500 ಕೋಟಿ ಬಾಕಿ
ಕೆಎಸ್‌ಆರ್‌ಟಿಸಿ ಆರ್ಥಿಕ ಸಂಕಷ್ಟಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ಸುಮಾರು ₹6,500 ಕೋಟಿ ಬಾಕಿ ಉಳಿದಿದೆ ಎಂದು ಆರೋಪಿಸಿದರು.
ಸಾರಿಗೆ ಸಂಸ್ಥೆಯ ಕಾರ್ಮಿಕರು, ಕ್ಲೀನರ್‌ಗಳು ಸೇರಿದಂತೆ ಸಿಬ್ಬಂದಿಗೆ ವೇತನ ನೀಡಲು ಸರ್ಕಾರಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನಲ್ಲಿನ ಆಂತರಿಕ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಎಚ್.ಕೆ. ಪಾಟೀಲ್ ಅವರ ಪತ್ರ, ಶಾಸಕ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಹಾಗೂ ಬಿ.ಆರ್. ಪಾಟೀಲ್ ಅವರ ಅಸಮಾಧಾನ ಸೇರಿದಂತೆ ಹಲವು ಬೆಳವಣಿಗೆಗಳು ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
“ಪಕ್ಷದ ಹಿರಿಯರೇ ಆಂತರಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ನೆಮ್ಮದಿಯಿಂದ ರಿಯಲ್ ಎಸ್ಟೇಟ್ ಮಾಡಲು ಕೂಡ ಆಗುವುದಿಲ್ಲ” ಎಂದು ವಿಜಯೇಂದ್ರ ಲೇವಡಿ ಮಾಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ