Publish Date: Sun, 04 Oct 2026 (13:54 IST)
Updated Date: Sun, 04 Oct 2026 (13:57 IST)
ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ಸಂಕಲ್ಪದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇವಾ ಸಂಕಲ್ಪ ಹಾಗೂ ಬೂತ್ ಸಂಕಲ್ಪವನ್ನು ಒಟ್ಟಾಗಿ ನಡೆಸಲಾಗುತ್ತಿದೆ. ಕಾಡುಗೊಲ್ಲರ ಜುಂಜಪ್ಪನ ಹಟ್ಟಿಯಲ್ಲಿ ದೇವರ ಸೇವೆ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಬರ ಪರಿಹಾರದಲ್ಲಿ ಸರ್ಕಾರದ ನಿರ್ಲಕ್ಷ್ಯ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾಯಿತ ಸರ್ಕಾರವೊಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ ಎಂಬ ಭಾವನೆ ಜನರಿಗೆ ಮೂಡುತ್ತಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯುತ್ತಾ ಕುಳಿತಿರುವ ರಾಜ್ಯ ಸರ್ಕಾರ, ಒಂದು ಹೆಕ್ಟೇರ್‌ಗೆ ಕೇವಲ ₹2,500 ಪರಿಹಾರ ಘೋಷಿಸಿರುವುದು ಅತ್ಯಂತ ಕಡಿಮೆ ಮೊತ್ತವಾಗಿದೆ ಎಂದು ಅವರು ಆಕ್ಷೇಪಿಸಿದರು.
“ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ರೈತರ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ನೀಡುವ ಬದಲು ಸರ್ಕಾರ ಅತ್ಯಲ್ಪ ಪರಿಹಾರ ಘೋಷಿಸಿದೆ” ಎಂದು ವಿಜಯೇಂದ್ರ ಹೇಳಿದರು.
ಮುಖ್ಯಮಂತ್ರಿಗಳಿಗೆ ರೈತರಿಗಿಂತ ರಿಯಲ್ ಎಸ್ಟೇಟ್ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ಇದೆ ಎಂಬ ಆರೋಪವನ್ನು ಜನರೇ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಬರ ಪರಿಹಾರಕ್ಕಾಗಿ ಸರ್ಕಾರದ ಪಕ್ಷದ ಶಾಸಕರೇ ರಾಜೀನಾಮೆ ನೀಡುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ: ವಿಜಯೇಂದ್ರ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದ್ದು, ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಹಣದ ಕೊರತೆ ಎದುರಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
“ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿಗೂ ಸಂಬಳ ನೀಡಲು ಹಣವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ನೈಜ ಹಣಕಾಸು ಸ್ಥಿತಿಯನ್ನು ಜನರ ಮುಂದೆ ಇಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ವೇತಪತ್ರ ಹೊರಡಿಸಬೇಕು” ಎಂದು ಒತ್ತಾಯಿಸಿದರು.
ಬಡವರು ಹಾಗೂ ರೈತರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಧಿಕಾರ ದುರುಪಯೋಗದ ಆರೋಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಟೆಕ್‌ಓವರ್ ಮಾಡಲು ಮುಂದಾಗಿದೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸ್ಥಳೀಯರ ವಿರೋಧದ ನಡುವೆಯೂ ಮುಂದುವರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಫಾರಂ-7 ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬರುವ ಮತದಾರರ ಬಗ್ಗೆ ಆಕ್ಷೇಪ ಸಲ್ಲಿಸಲು ಫಾರಂ-7 ಮೂಲಕ ಅವಕಾಶವಿದೆ. ಆದರೆ ಇದೇ ಫಾರಂ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.
“ನಾವು ಸಲ್ಲಿಸಿದ ಅರ್ಜಿಗಳು ನಿಯಮಬದ್ಧವಾಗಿಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ತಿರಸ್ಕರಿಸುತ್ತಾರೆ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಅಗತ್ಯವೇನು?” ಎಂದು ಅವರು ಪ್ರಶ್ನಿಸಿದರು.
“ಅಧಿಕಾರದ ಮದ ಏರಿದರೆ ಏನಾಗುತ್ತದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಕಲಿಯಬೇಕು”
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರದ ಮದ ನೆತ್ತಿಗೇರಿದೆ ಎಂದು ವಿಜಯೇಂದ್ರ ಟೀಕಿಸಿದರು.
“ಅಧಿಕಾರದ ಮದ ಏರಿದರೆ ಏನಾಗುತ್ತದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಅವರು ಹಿಂದಿನ ಘಟನೆಗಳಿಂದ ಕಲಿಯಬೇಕು. ವೀರಶೈವ-ಲಿಂಗಾಯತ ಸ್ವಾಮೀಜಿಗಳ ಸಭೆಯಲ್ಲಿ ಮಠಗಳ ಸಂಖ್ಯೆಯನ್ನು ಉಲ್ಲೇಖಿಸುವ ರೀತಿಯಲ್ಲಿಯೂ ಅವರು ಮಾತನಾಡಿದ್ದಾರೆ. ಮೂರು ಸಾವಿರವೋ, ಆರು ಸಾವಿರವೋ ಮಠಗಳಿವೆ ಎಂದು ಹೇಳುವ ಮೂಲಕ ಮಠಾಧೀಶರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ” ಎಂದು ವಿಜಯೇಂದ್ರ ಆರೋಪಿಸಿದರು.
ಜನರು ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
“ಜನರೊಂದಿಗೆ ಸೇರಿ ಬದಲಾವಣೆಗೆ ಸಂಕಲ್ಪ”
ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ವಿಜಯೇಂದ್ರ, ಬಡವರು ಮತ್ತು ರೈತರ ಪರವಾಗಿ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಲಿದೆ ಎಂದರು.
“ಈ ಸರ್ಕಾರವನ್ನು ಬದಲಾಯಿಸಬೇಕು ಎಂಬ ಸಂಕಲ್ಪವನ್ನು ನಾವು ಮತ್ತು ಜನರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸಂಘಟನೆ ಹಾಗೂ ಜನರೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತೇವೆ” ಎಂದು ವಿಜಯೇಂದ್ರ ಹೇಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ